ಹುಣಸೂರು: ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿರುವುದನ್ನು ಖಂಡಿಸಿ ತಾಲೂಕು ವಾಲ್ಮೀಕಿ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ಸಂವಿಧಾನ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಮುಖಂಡರಾದ ಅಣ್ಣಯ್ಯನಾಯಕ, ಮಯೂರ, ಜಯಕುಮಾರ್, ನಿಲುವಾಗಿಲು ಪ್ರಭಾಕರ್ ಮಾತನಾಡಿ, ಹಿರಿಯ, ಅನುಭವಿ ರಾಜಕಾರಣಿ ಕೆ.ಎನ್.ರಾಜಣ್ಣ ಅವರಿಗೆ ಅನ್ಯಾಯವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರ ರಾಜಣ್ಣ ಅವರನ್ನು ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸಂಪುಟದಿಂದ ರಾಜಣ್ಣ ವಜಾಕ್ಕೆ ನಡೆದಿರುವ ಷಡ್ಯಂತ್ರವನ್ನು ಬಯಲುಗೊಳಿಸಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ವಹಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಕ್ಷಣವೂ ಬೆಂಬಲವಾಗಿ ನಿಂತ ರಾಜಣ್ಣ ಅವರನ್ನು ವಜಾಗೊಳಿಸಿರುವುದು ಖಂಡನೀಯ. ಕಾಂಗ್ರೆಸ್ ಪಕ್ಷದ ಹಿರಿಯರು ಈ ಕುರಿತ ನಿರ್ಧಾರವನ್ನು ಮರು ಪರಿಶೀಲಿಸಬೇಕೆಂದು ಆಗ್ರಹಿಸಿದರು.
ಮುಖಂಡರಾದ ವೆಂಕಟೇಶನಾಯಕ, ದೇವರಾಜ್, ಕೃಷ್ಣನಾಯಕ, ದೇವನಾಯಕ, ಪುಟ್ಟ, ಭಾಸ್ಕರ್, ಗೋವಿಂದ, ಕೆಂಪನಾಯಕ, ಸೋಮು, ಚೌಡಪ್ಪನಾಯಕ, ಮದಕರಿನಾಯಕ, ಮರಿನಾಯಕ, ವೆಂಕಟೇಶ್ ಇತರರು ಇದ್ದರು. ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.