ಅರಸೀಕೆರೆ : ಒಳಮೀಸಲಾತಿ ಅನುಷ್ಠಾನಕ್ಕೆ ಸರ್ಕಾರ ಅನುಸರಿಸುತ್ತಿರುವ ವಿಳಂಬ ಧೋರಣೆ ಖಂಡಿಸಿ ಅ.16 ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಎ.ಪಿ.ಚಂದ್ರಯ್ಯ ಹೇಳಿದರು.
ಸದಾಶಿವ ಆಯೋಗದ ವರದಿ ಆಧರಿಸಿ ಒಳ ಮೀಸಲಾತಿ ಜಾರಿಗೆ ತರುವಂತೆ ನಿರಂತರ ಹೋರಾಟ ನಡೆಸಿದ್ದೇವೆ. ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಕೂಡ ಆದೇಶ ನೀಡಿದ್ದರೂ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದು. ಸರಿಯಲ್ಲ. ಅರ್ಹ ಶೋಷಿತರಿಗೆ ನ್ಯಾಯ ಕೊಡಿಸಲು ಹಿಂದೇಟು ಹಾಕುತ್ತಿರುವ ನಡೆ ಖಂಡಿಸಿ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಂಡಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಸಮುದಾಯದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೀಸಲಾತಿ ಹೋರಾಟ ಸಮಿತಿ ನಗರಾಧ್ಯಕ್ಷ ಜಯಕುಮಾರ್, ಪ್ರಧಾನ ಕಾರ್ಯದರ್ಶಿ ಕರಿಯಪ್ಪ, ಎಚ್.ಟಿ.ಶಿವಮೂರ್ತಿ, ಗ್ರಾಪಂ ಸದಸ್ಯ ಮಂಜುನಾಥ್, ದಸಂಸ ವಿಭಾಗೀಯ ಕಾರ್ಯದರ್ಶಿ ಭಾಸ್ಕರ್, ರುದ್ರಮುನಿ ಇನ್ನಿತರರು ಹಾಜರಿದ್ದರು.