ಜಿಲ್ಲೆ

ಸುವರ್ಣಸೌಧ ಎದುರು ನಾಳೆ ಪ್ರತಿಭಟನೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ನೀಡುವಂತೆ ಆಗ್ರಹಿಸಿ ಬೆಳಗಾವಿ ಸುವರ್ಣಸೌಧ ಎದುರು ಡಿ. 7ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಅಭಿವೃದ್ಧಿ ವೇದಿಕೆ ಉಪಾಧ್ಯಕ್ಷ ವಿಠ್ಠಲ ಕಮ್ಮಾರ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ನಗರದ ಅಭಿವೃದ್ಧಿಯಲ್ಲಿ ಆಗುತ್ತಿರುವ ಅನ್ಯಾಯದಿಂದ ಬೇಸತ್ತು ಪ್ರತ್ಯೇಕ ಪಾಲಿಕೆಗೆ ಬೇಡಿಕೆ ಇಡಲಾಗಿದೆ. ಈ ವಿಷಯವಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರಗಳಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಅಧಿವೇಶನದಲ್ಲಿ ಚರ್ಚೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳಲು ಆಗ್ರಹಿಸಿ ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.
ಪಾಲಿಕೆ ಸದಸ್ಯರು ಪಕ್ಷಾತೀತವಾಗಿ ಪ್ರತ್ಯೇಕ ಮಹಾನಗರ ಪಾಲಿಕೆಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಜನಪ್ರತಿನಿಧಿಗಳ ಸ್ಪಂದನೆ ಸಿಗದ ಕಾರಣ ಹಿನ್ನಡೆ ಆಗುತ್ತಿದೆ. ಪ್ರತ್ಯೇಕ ಪಾಲಿಕೆಗೆ ಬೇಕಿರುವ ಎಲ್ಲ ಅರ್ಹತೆಗಳನ್ನು ಧಾರವಾಡ ಹೊಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಆಸಕ್ತಿ ವಹಿಸಿದ್ದು, ಮುಖ್ಯಮಂತ್ರಿ ಜತೆಗೆ ಸಹ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.
ವೇದಿಕೆ ಸಹ ಕಾರ್ಯದರ್ಶಿ ವಸಂತ ಅರ್ಕಾಚಾರ ಮಾತನಾಡಿ, ಪ್ರತ್ಯೇಕ ಪಾಲಿಕೆ ಕುರಿತು ಶಾಸಕ ವಿನಯ ಕುಲಕರ್ಣಿ ಜತೆಗೂ ಚರ್ಚಿಸಲಾಗಿದೆ. ಆದರೆ ಅವರಿಗೆ ಕೆಲವರು ಹಾದಿ ತಪ್ಪಿಸುವ ಕೆಲಸ ಮಾಡಿದ್ದರಿಂದ ತಪ್ಪು ಸಂದೇಶ ರವಾನೆಯಾಗಿತ್ತು. ಕೆಲ ದಿನಗಳ ಹಿಂದೆ ಅವರೊಂದಿಗೆ ಸಭೆ ನಡೆಸಿ ಸಂಪೂರ್ಣ ಮಾಹಿತಿ ನೀಡಲಾಗಿದೆ. ಹೀಗಾಗಿ ಅಧಿವೇಶನದಲ್ಲಿ ಈ ಕುರಿತು ಪ್ರಶ್ನೆ ಎತ್ತಲಾಗುವುದು ಎಂದು ತಿಳಿಸಿದ್ದಾರೆ ಎಂದರು.
ಈಗಾಗಲೇ ಸಚಿವ ಎಚ್.ಕೆ. ಪಾಟೀಲ ಸೇರಿ ಇನ್ನೂ ಕೆಲವರು ಪ್ರತ್ಯೇಕ ಪಾಲಿಕೆ ಪರವಾಗಿದ್ದಾರೆ. ಹೈಕೋರ್ಟ್ ಪೀಠ ಹೋರಾಟದ ಮಾದರಿಯಲ್ಲೇ ಈ ಹೋರಾಟವೂ ನಡೆದರೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ. ಅಧಿವೇಶನದ ಚರ್ಚೆ ಗಮನಿಸಿ ಮುಂದಿನ ಹೋರಾಟ ಕುರಿತು ನಿರ್ಧಾರ ಮಾಡಲಾಗುವುದು ಎಂದರು.