ಜಿಲ್ಲೆ

ಸರ್ಕಾರದ ನಡೆ ಖಂಡಿಸಿ ನಗರಸಭೆ ಮುಂಭಾಗ ಪ್ರತಿಭಟನೆ

ಮಡಿಕೇರಿ: ಪರಿಸರ ಮಾಲಿನ್ಯ ಹೆಸರಿನಲ್ಲಿ ಗಣೇಶೋತ್ಸವದ ಆಚರಣೆಗೆ ಅಡ್ಡಿಪಡಿಸುತ್ತಿರುವ ಸರ್ಕಾರ, ಮತ್ತು ನಗರಸಭೆಯ ನಡೆ ಖಂಡಿಸಿ ಮಡಿಕೇರಿ ನಗರಸಭೆ ಮುಂಭಾಗ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಒಕ್ಕೂಟ ವತಿಯಿಂದ ಪ್ರತಿಭಟನೆ ನಡೆಸಲಾಯಿತು.


ಗಣೇಶ ಆಚರಣೆಗೆ ೧೦೦ ರೂ ಮೌಲ್ಯದ ಬಾಂಡ್, ಛಾಪಾ ಕಾಗದದಲ್ಲಿ ಮುಚ್ಚಳಿಕೆ, ೧೦ ಸಾವಿರ ರೂ.ದಂಡ ಹಾಗೂ ಜೈಲುವಾಸ ಸೇರಿದಂತೆ ಇತರ ಅತಿರೇಕದ ನಿಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಕಾರ್ಯಕರ್ತರು, ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಹಾಗೂ ನಗರಸಭೆ ಪೌರಾಯುಕ್ತರ ವಿರುದ್ಧ ಧಿಕ್ಕಾರ ಕೂಗಿದರು.


ಈ ಸಂದರ್ಭ ಪ್ರಾಂತ ಸಂಘಟಕ ಉಲ್ಲಾಸ್ ಮಾತನಾಡಿ, ಸರ್ಕಾರದಿಂದ ಗಣೇಶೋತ್ಸವಕ್ಕೆ ಸುತ್ತೋಲೆ ಹೊರಡಿಸುವುದು ಸಾಮಾನ್ಯ. ಆದರೆ, ಇತ್ತೀಚೆಗೆ ಮಡಿಕೇರಿ ನಗರಸಭೆ ಪೌರಾಯುಕ್ತರು ಗಣೇಶೋತ್ಸವದ ಹಿನ್ನೆಲೆ ವಿಶೇಷ ಸುತ್ತೋಲೆವೊಂದನ್ನು ಹೊರಡಿಸಿದ್ದರು. ಅದರಲ್ಲಿ ಗಣೇಶನನ್ನು ಕೂರಿಸುವ ಸಮಿತಿಯವರು ೧೦೦ ರೂ. ಬಾಂಡ್‌ನಲ್ಲಿ ಮುಚ್ಚಳಿಕೆ ಬರೆದುಕೊಡಬೇಕು. ಇಲ್ಲದಿದ್ದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದರು. ಇದು ಇಪ್ಪಿಕೊಳ್ಳುವಂತಹ ನಿಯಮವಲ್ಲ ಎಂದ ಅವರು, ಸ್ವಾತಂತ್ರ್ಯ ಕಾಲದಿಂದ ಆರಂಭವಾದ ಸಾರ್ವಜನಿಕರ ಗಣೇಶೋತ್ಸವಕ್ಕೆ ಇಂದು ಬಾಂಡ್ ಬರೆದುಕೊಟ್ಟು ಆಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.


ಏಕಗವಾಕ್ಷಿಯಾಗಿ ಗಣೇಶೋತ್ಸವಕ್ಕೆ ವ್ಯವಸ್ಥೆಯಾಗಬೇಕು. ಆದರೆ, ಇಂದು ಸರ್ಕಾರ ಇಲ್ಲಸಲ್ಲದ ಶರತ್ತುಗಳನ್ನು ವಿಧಿಸುತ್ತಿದೆ. ಏಸಿ ರೂಂನಲ್ಲಿ ಕೂತು ಸುತ್ತೋಲೆ ಹೊರಡಿಸುವ ಅಧಿಕಾರಿಗಳಿಗೆ ಜನರ ಭಾವನೆಗಳು ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ೧೦ ಗಂಟೆಯ ನಂತರ ಮೈಕ್ ಬಳಸಲು ಅನುಮತಿ ನೀಡದ ಪೌರಯುಕ್ತರೇ ನಗರದಲ್ಲಿ ಮುಸಲ್ಮಾನರು ಕೂಗುವ ಪ್ರಾರ್ಥನೆಯನ್ನು ನಿಲ್ಲಿಸುವ ತಾಕತ್ತು ಇದ್ಯ ಎಂದು ಸವಾಲು ಹಾಕಿದ ಅವರು, ಇದನ್ನು ನಿಲ್ಲಿಸಿ ನಂತರ ಗಣೇಶೋತ್ಸವಕ್ಕೆ ಬನ್ನಿ. ಸಹಜವಾಗಿ ನಡೆಯುತ್ತಿದ್ದ ಗಣೇಶೋತ್ಸವಕ್ಕೆ ಬಾಂಡ್ ಕೊಡಿ ಎಂದು ಕೇಳುವ ಪೌರಾಯುಕ್ತರಿಗೆ ಗಣೇಶೋತ್ಸವದ ಜ್ಞಾನವಿಲ್ಲ ಎನಿಸುತ್ತಿದೆ. ಎಲ್ಲ ಅಧಿಕಾರಿಗಳು ಸಹಕಾರ ನೀಡಿದಾಗ ಪೌರಾಯುಕ್ತರು ಇಲ್ಲಸಲ್ಲದ ನಿಯಮವನ್ನು ಹೊರಡಿಸುತ್ತಾರೆ ಇದು ಸರಿಯಲ್ಲ ಎಂದರು.


ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ನಗರಸಭೆ ಪೌರಾಯುಕ್ತರಾದ ವಿಜಯ್ ಮಾತನಾಡಿ, ಗಣೇಶೋತ್ಸವ ರಾಷ್ಟ್ರದಾದ್ಯಂತ ನಡೆಯುವ ಹಬ್ಬ. ಕಳೆದ ವರ್ಷ ಇಂತಹ ನಿಯಮ ಇರಲಿಲ್ಲ. ಪ್ರಸಕ್ತ ಸಾಲಿನಲ್ಲಿ ಸರ್ಕಾರದಿಂದ ಆದೇಶ ಬಂದ ಹಿನ್ನೆಲೆ ಹಾಕಿದ್ದೇವೆ. ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.


ಪೌರಾಯುಕ್ತರು, ಬಾಂಡ್ ವ್ಯವಸ್ಥೆಯಿಲ್ಲ. ಏಕಗವಾಕ್ಷಿ ಎಲ್ಲದಕ್ಕೂ ಅನುಮತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ ಹಿನ್ನೆಲೆ ಪ್ರತಿಭಟನೆಯನ್ನು ಕೈಬಿಡಲಾಯಿತು.


ಪ್ರತಿಭಟನೆಯಲ್ಲಿ ಜಿಲ್ಲಾ ಸಂಯೋಜಕ ಕುಕ್ಕೇರ ಅಜಿತ್, ಸಹಸಂಯೋಜಕರಾದ ಚೇತನ್, ಯೋಗೇಶ್, ಬೋಜೇಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಮಾಜಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಉಪಾಧ್ಯಕ್ಷ ಅರುಣ್ ಶೆಟ್ಟಿ, ಮನುಮಂಜುನಾಥ್, ಖಜಾಂಜಿ ಕನ್ನಂಡ ಸಂಪತ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಹಾಗೂ ಶ್ರೀ ಗಣೇಶೋತ್ಸವ ಸಮಿತಿಗಳ ಒಕ್ಕೂಟ ಪದಾಧಿಕಾರಿಗಳು, ಹಿಂದೂ ಬಾಂಧವರು ಪಾಲ್ಗೊಂಡಿದ್ದರು.