ಬೆಂಗಳೂರು: ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಅವ್ಯವಹಾರಕ್ಕೆ ಆರ್‌ಬಿಐ ನಿರ್ಲಕ್ಷ್ಯ ಧೋರಣೆಯೂ ಪ್ರಮುಖ ಕಾರಣ ಎಂದು ಆರೋಪಿಸಿ ನೂರಾರು ಠೇವಣಿದಾರರು ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.
ಬೆಳಗ್ಗೆ ಹಲಸೂರು ಗೇಟ್ ಠಾಣೆ ಮುಂಭಾಗ ಜಮಾಯಿಸಿದ್ದ ನೂರಾರು ಮಂದಿ ಠೇವಣಿದಾರರು ಆರ್‌ಬಿಐ ನಿರ್ಲಕ್ಷ್ಯ, ಶ್ರೀ ಗುರುರಾಘವೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಆರ್‌ಬಿಐ ಒಳ್ಳೆಯ ರೇಟಿಂಗ್ ಕೊಟ್ಟು, ಎಲ್ಲ ವ್ಯವಹಾರ ಸರಿಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ಗಮನಿಸಿ ಹಲವು ವರ್ಷಗಳಿಂದ ಸಂಪಾದಿಸಿ ಕೂಡಿಟ್ಟ ಎಲ್ಲ ಹಣವನ್ನೂ ಈ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದ್ದೆವು. ಇದೀಗ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಕೂಡಲೇ ಸರ್ಕಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಗಬೇಕು ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.