ಜಿಲ್ಲೆ

ಸರ್ಕಾರಿ ಆಸ್ಪತ್ರೆ ಮುಂದೆ ಪ್ರತಿಭಟನೆ

ಅರಕಲಗೂಡು: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಮೃತಪಟ್ಟ ವ್ಯಕ್ತಿಯ ಮೃತದೇಹ ನೀಡದೆ ಮರಣೋತ್ತರ ಪರೀಕ್ಷೆ ನಡೆಸುವುದಾಗಿ ಸತಾಯಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕುಟುಂಬಸ್ಥರು ಶನಿವಾರ ದಿಢೀರ್ ಪ್ರತಿಭಟಿಸಿ ವೈದ್ಯರೊಂದಿಗೆ ಮಾತಿನ ಚಕಮಕಿ ನಡೆಸಿದರು.


ತಾಲೂಕಿನ ಮಲ್ಲಿಪಟ್ಟಣ ಹೋಬಳಿ ದಡದಹಳ್ಳಿ ಗ್ರಾಮದ ರವಿ ಅವರನ್ನು ಶನಿವಾರ ಬೆಳಗ್ಗೆ ಆಸ್ಪತ್ರೆಗೆ ಕರೆತರಲಾಗಿತ್ತು, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದರು. ಶವ ಪರೀಕ್ಷೆ ನಡೆಸುವ ತನಕ ಮೃತದೇಹ ನೀಡುವುದಿಲ್ಲ, ಪೊಲೀಸರಿಗೆ ದೂರು ನೀಡಲಾಗಿದೆ ಎಂದು ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದಾರೆ.


ಮಧ್ಯಾಹ್ನವಾದರೂ ಕುಟುಂಬಸ್ಥರಿಗೆ ಮೃತದೇಹ ನೀಡಿಲ್ಲ. ಕರ್ತವ್ಯಕ್ಕೆ ಹಾಜರಾದ ವೈದ್ಯಾಧಿಕಾರಿ ಡಾ.ರಮೀಜ್ ಅವರು, ‘ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಬಂದು ಶವ ಪರೀಕ್ಷಿಸಿ ಪತ್ರ ನೀಡಿದ ನಂತರ ಮೃತದೇಹವನ್ನ ನೀಡಲಾಗುವುದು’ ಎಂದು ಕುಟುಂಬಸ್ಥರಿಗೆ ತಿಳಿಸಿದರು.


ಬೆಳಗ್ಗೆಯಿಂದ ಕಾದು ಸುಸ್ತಾಗಿದ್ದ ಕುಟುಂಬಸ್ಥರು ಆಕ್ರೋಶಗೊಂಡು ಮೃತವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಸಾವಿನ ಬಗ್ಗೆ ಕುಟುಂಬಸ್ಥರಲ್ಲಿ ಯಾವುದೇ ಸಂಶಯವಿಲ್ಲ. ಆದರೂ ಶವ ಪರೀಕ್ಷೆ ಮಾಡುವುದಾಗಿ ಹೇಳಿ ಸತಾಯಿಸಲಾಗುತ್ತಿದೆ, ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರ ಸಮಸ್ಯೆ ಕೇಳುವವರೇ ಇಲ್ಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಆರಂಭಿಸಿದರು.


ನಂತರ ಪೊಲೀಸರು ಹಾಗೂ ಕಾಂಗ್ರೆಸ್ ಮುಖಂಡ ಎಚ್.ಪಿ.ಶ್ರೀಧರ್‌ಗೌಡ ಅವರು ಸ್ಥಳಕ್ಕೆ ಧಾವಿಸಿ ವೈದ್ಯರು ಮತ್ತು ಕುಟುಂಬಸ್ಥರೊಂದಿಗೆ ಚರ್ಚಿಸಿ ಮೃತ ವ್ಯಕ್ತಿಯ ಕುಟುಂಬದವರಿಂದ ಪತ್ರ ಬರೆಸಿ ಸಹಿ ಹಾಕಿಸಿಕೊಂಡು ಶವವನ್ನು ಹಸ್ತಾಂತರಿಸಿದರು.