ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿರುವ ರಾಜ್ಯ ಬಿಜೆಪಿ-ಜೆಡಿಎಸ್ ವಿರುದ್ಧ ನವೆಂಬರ್ 7ರಂದು ಹೊಸದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲು ಅಹಿಂದ, ಶೋಷಿತ ವರ್ಗಗಳ ಮುಖಂಡರು ನಿರ್ಣಯ ಕೈಗೊಂಡರು.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಶೋಷಿತ ಸಮುದಾಯಗಳ ಅಹಿಂದ ಮುಖಂಡರ ದೆಹಲಿ ಚಲೋ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದೆ. ರಾಷ್ಟ್ರಪತಿ ಮಧ್ಯ ಪ್ರವೇಶಿಸಿ ಈ ತಂತ್ರಗಾರಿಕೆ ತಡೆಯಬೇಕು ಎಂದು ರಾಷ್ಟ್ರಪತಿ ದ್ರೌಪತಿ ಮರ್ಮು ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಸಾಹಿತಿಗಳಾದ ಬಂಜಗೆರೆ ಜಯಪ್ರಕಾಶ್, ದಿನೇಶ್ ಅಮೀನ್ ಮಟ್ಟು, ನಾ.ದಿವಾಕರ್ ಸೇರಿದಂತೆ ಪ್ರಗತಿಪರ ಚಿಂತಕ, ಸಾಹಿತಿಗಳು, ರಾಜಕೀಯ ನೇತಾರರು ನೇತೃತ್ವ ಧರಣಿ ನಡೆಸಲು ತೀರ್ಮಾನಿಸಲಾಯಿತು.
ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಮಾತನಾಡಿ, ರಾಜ್ಯದಲ್ಲಿ ಧರ್ಮ-ಅಧರ್ಮದ ಯುದ್ಧ ನಡೆಯುತ್ತಿದೆ. ನಾನು ಬಿಜೆಪಿ ಬಿಡುವ ಸಂದರ್ಭದಲ್ಲಿ ಇನ್ನೂ ಆರು ತಿಂಗಳಲ್ಲಿ ಸರ್ಕಾರ ಬೀಳಿಸುತ್ತೇವೆ ಎಂದಿದ್ದರು. ಅದರಂತೆ ಕುತಂತ್ರ ನಡೆಸಿದ್ದಾರೆ. ಬಿಜೆಪಿ-ಜೆಡಿಎಸ್ ಕುತಂತ್ರ ವಿರೋಧಿಸಿ ಅಲ್ಲಿನ ನಾಯಕರೇ ಸಿದ್ದರಾಮಯ್ಯ ಪರ ನಿಂತಿದ್ದಾರೆ ಎಂದರು.
ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ ಮಾತನಾಡಿ, ಬಿಜೆಪಿ-ಜೆಡಿಎಸ್ ನಾಯಕರು ನೂರಾರು ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಆದರೆ 78ನೇ ವಯಸ್ಸಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನೆ ಕಟ್ಟುವುದನ್ನು ಸಹಿಸಲಾಗುತ್ತಿಲ್ಲ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಯಾರಿಂದಲೂ ಸಾಧ್ಯವಿಲ್ಲ. ಹೊಸದಿಲ್ಲಿ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ಮಾತನಾಡಿ, 40 ವರ್ಷದ ರಾಜಕಾರಣದಲ್ಲಿ ಕೋಮುವಾದಿ, ಜಾತಿವಾದಿಗಳ ವಿರುದ್ಧದ ಗಟ್ಟಿ ಧ್ವನಿಯಾಗಿರುವ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿದರೆ ಕೋಮುವಾದ, ಜಾತಿವಾದವನ್ನು ಎಲ್ಲೆಡೆ ಹರಡಬಹುದು ಎಂಬ ಉದ್ದೇಶದಿಂದ ಕುತಂತ್ರ ನಡೆಸಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿ, ಪ್ರಗತಿಪರ ಸೈದ್ಧಾಂತಿಕತೆ ಹೊಂದಿದ್ದ ವೀರಪ್ಪ ಮೊಯ್ಲಿ, ಬಂಗಾರಪ್ಪ, ದೇವರಾಜ ಅರಸು ಅವರನ್ನು ವ್ಯವಸ್ಥಿತವಾಗಿ ಮುಗಿಸಿದರು. ಈಗ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿ ಕೋಮು ಗಲಭೆ ಸೃಷ್ಟಿಸುವ ಸನ್ನಿವೇಶ ಎದುರಾಗಿದೆ. ಇದನ್ನು ತಡೆಯಲು ರಾಷ್ಟ್ರಪತಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು.
ಸಮಾಜ ಸೇವಕ ರಘುರಾಂ ವಾಜಪೇಯಿ ಮಾತನಾಡಿ, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾತನಾಡದೆ ಅಧಿಕಾರದ ದುರಾಸೆಯಿಂದ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಿರುಕುಳ ನೀಡುತ್ತಿದ್ದು, ಇದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಸವಿತ ಸಮಾಜದ ಅಧ್ಯಕ್ಷ ಎನ್.ಆರ್.ನಾಗೇಶ್, ಕುರುಬರ ಸಂಘದ ಶಿವಪ್ಪ ಕೋಟೆ, ವಿಶ್ವಕರ್ಮ ಸಮುದಾಯದ ಮೊಗ್ಗಣ್ಣಾಚಾರ್, ತಾ.ಪಂ. ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ, ಮುಖಂಡರಾದ ಯೋಗೇಶ್ ಉಪ್ಪಾರ್, ಎನ್.ಆರ್.ಸಿದ್ದು, ಹರೀಶ್ ಮೊಗಣ್ಣ, ಮಂಜು, ಶ್ರೀಕಾಂತ್, ಕೇಶವ್, ಹರೀಶ್ ರೆಡ್ಡಿ, ವಿಶ್ವ ಕುರುಬರಹಳ್ಳಿ, ನಾಸೀರ್, ಶಾಂತಮ್ಮ, ಮಂಗಳಾ, ಲೀಲಾ, ಭಾಗ್ಯಾ, ಆರ್.ಕೆ.ರವಿ, ನಜರಬಾದ್ ರವಿ, ಪಿ.ಆರ್.ಮಂಜು, ರವಿನಂದನ್, ಲೋಕೇಶ್‌ಕುಮಾರ್ ಮಾದಾಪುರ, ಮಹೇಂದ್ರ ಕಾಗಿನೆಲೆ, ಸಲೀಂ, ನವೀನ್, ಎಂ.ಎಫ್.ಖಾಲೀಂ, ರಹೀಮ್, ರಾಜೇಶ್, ಕಲ್ಪನಾ, ಲಕ್ಷ್ಮೀ ಇತರರು ಇದ್ದರು.