ಜಿಲ್ಲೆ

ಆ.14 ಮತ್ತು 15ರಂದು ಬೆಂಗಳೂರಲ್ಲಿ ಬರಿಹೊಟ್ಟೆ ಸತ್ಯಾಗ್ರಹ: ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಎಂ.ಸಿದ್ದರಾಜು ಮಾಹಿತಿ

ಮಂಡ್ಯ: ಬದುಕಿನ ಸ್ವಾತಂತ್ರ್ಯಕ್ಕಾಗಿ ಭೂಮಿ, ವಸತಿ ಮತ್ತು ನಿವೇಶನ ವಂಚಿತ ಬಡವರಿಂದ ಆ.14 ಮತ್ತು 15ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಸಾಮೂಹಿಕ ಬರಿಹೊಟ್ಟೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಎಂ.ಸಿದ್ದರಾಜು ಎಂದು ಹೇಳಿದರು.

ದಶಕಗಳಿಂದ ಹಕ್ಕುಪತ್ರಗಳಿಗಾಗಿ ಕಾದಿರುವ 60 ರಿಂದ 70 ಲಕ್ಷದಷ್ಟು ಅಗಾಧ ಸಂಖ್ಯೆಯ ಅರ್ಜಿ ಬಾಕಿಯಿದ್ದು, ಈ ಸಮಸ್ಯೆಯಿಂದ ನಲುಗಿರುವ ರಾಜ್ಯದ ಎಲ್ಲ ಜಿಲ್ಲೆಗಳ ಸಾವಿರಾರು ಜನರು ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕಂದಾಯ, ಅರಣ್ಯ, ವಸತಿ ಮತ್ತು ಗ್ರಾಮೀಣಾಭಿವೃದ್ಧಿ ಮಂತ್ರಿಗಳು ಮತ್ತು ಹೋರಾಟದ ಪ್ರತಿನಿಧಿಗಳು ಇರುವಂತೆ ಶೀಘ್ರವೇ ಉನ್ನತಮಟ್ಟದ ಸಭೆ ಕರೆಯಬೇಕು. ಭೂಮಿ, ಮನೆ, ನಿವೇಶನಗಳ ಮಂಜೂರಾತಿಯನ್ನು ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕು. ಕಾಲಮಿತಿಯೊಳಗೆ ಇದನ್ನು ಜಾರಿಗೊಳಿಸಲು ಹೈ-ಪವರ್ ಕಮಿಟಿ ರಚಿಸಬೇಕು. ಈ ಹಿಂದಿನಂತೆ ಇದರಲ್ಲಿ ಹೋರಾಟದ ಪ್ರತಿನಿಧಿಗಳೂ ಇರಬೇಕು. ಸಂಬಂಧಪಟ್ಟ ವಿವಿಧ ಇಲಾಖೆಗಳ ನಡುವೆ ಉನ್ನತ ಮಟ್ಟದಲ್ಲಿ ಸುಲಲಿತಗೊಳಿಸಲು ಈ ಕಮಿಟಿ ಒಬ್ಬೊಬ್ಬರು ಸಂಪುಟ ದರ್ಜೆ ಮಂತ್ರಿಗಳ ನೇತೃತ್ವದಲ್ಲಿ ಕಾರ್ಯನಿರ್ವಹಿಸಬೇಕೆಂದು ಒತ್ತಾಯಿಸಲಾಗುವುದು ಎಂದರು.

ಸಮಿತಿಯ ಜಿ.ಪೂರ್ಣಿಮಾ, ಸೌಮ್ಯ, ನಗರಕೆರೆ ಜಗದೀಶ್, ನಿಂಗಮ್ಮ ಇತರರಿದ್ದರು.