ಬಬಲೇಶ್ವರ : ಬೆಳಗಾವಿಯಲ್ಲಿ ನಡೆದಿರುವ ಅಧಿವೇಶನ ಸಂದರ್ಭದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ಪಂಚಮಸಾಲಿ ಸಮಾಜ ಬಾಂಧವರ ಮೇಲೆ ಸೋಮವಾರ ಪೊಲೀಸರು ಲಾಠಿ ಚಾರ್ಜ್ ಮಾಡಿ, ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದು, ಇದು ತೀವ್ರ ಖಂಡನಾರ್ಹ ಎಂದು ಬಬಲೇಶ್ವರದ ಬ್ರಹ್ಮಮಠದ ಪೀಠಾಧಿಪತಿ ಹಾಗೂ ಪಂಚಮಸಾಲಿ ಆಲಗೂರು ಪೀಠದ ಮೂರನೇ ಜಗದ್ಗುರು ಡಾ. ಮಹಾದೇವ ಶಿವಾಚಾರ್ಯರು ಹೇಳಿದ್ದಾರೆ. ಸರ್ಕಾರದ ಹಿಟ್ಲರ್ ಧೋರಣೆಯನ್ನು ಖಂಡಿಸಿ, ಡಿ. 12 ರಂದು ಬೆಳಗ್ಗೆ 10 ಗಂಟೆಗೆ ಬಬಲೇಶ್ವರ ನಗರದ ಶಾಂತವೀರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದಕ್ಕೆ ಜಿಲ್ಲೆಯ ಸಮಸ್ತ ಪಂಚಮಸಾಲಿ ಸಮಾಜದ ಬಾಂಧವರು ಆಗಮಿಸಬೇಕು ಎಂದು ಮನವಿ ಮಾಡಿದ್ದಾರೆ.