ಜಿಲ್ಲೆ

ಅಕ್ರಮ ಮರದ ಕಾರ್ಖಾನೆ ಬಂದ್ ಮಾಡದಿದ್ದರೆ ಹೋರಾಟ

ಪ್ರಸಿನ್ ಕೆ.ಆರ್

ಹಾಸನ: ರಾಜ್ಯದಲ್ಲಿ ಸುಮಾರು 670ಕ್ಕೂ ಹೆಚ್ಚು ಅಕ್ರಮ ಮರದ ಕಾರ್ಖಾನೆಗಳು ನಡೆಯುತ್ತಿದ್ದು, ಅವುಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದೆ ಇದ್ದರೆ ಕಾನೂನು ಹೋರಾಟಕ್ಕಿಳಿಯುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.

ಎಲ್ಲ ಕಾರ್ಖಾನೆಗಳಿಗೆ ನಿತ್ಯವೂ ಮರ ರವಾನೆಯಾಗುತ್ತಿವೆ. ಇದು ಯಾರಿಂದ, ಹೇಗೆ? ಅಕ್ರಮ ಕಾರ್ಖಾನೆಗಳಿಗೆ ಸರ್ಕಾರಗಳ ಕಡೆಯವರೇ ಮರ ಪೂರೈಕೆ ಮಾಡುವ ಮೂಲಕ ಅರಣ್ಯ ನಾಶಕ್ಕೆ ಮುಂದಾಗಿದ್ದಾರೆ. ಕಾಡು ರಕ್ಷಣೆ ಮಾಡಬೇಕಾದವರೇ ದರೋಡೆಗೆ ನಿಂತಿದ್ದಾರೆ. ಯಾರೂ, ಯಾವುದೇ ಕಾರಣಕ್ಕೂ ಮರಗಳ್ಳರಿಗೆ ಬೆಂಬಲ ನೀಡುವುದು ಬೇಡ ಎಂಬುದು ನಮ್ಮ ಆಗ್ರಹ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ನೀಲಗಿರಿ ಮರ ನಿಷೇಧ ಮಾಡಬೇಕೆಂದು ತೀರ್ಮಾನಿಸಿ ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ನೀಲಗಿರಿಮುಕ್ತ ಮಾಡಲು ಆದೇಶ ಮಾಡಿದ್ದರು. ಆದರೆ ಅದು ಆಗಲಿಲ್ಲ. ಹಾಸನ ಜಿಲ್ಲೆಯ ಗುಂಡ್ಯ ಭಾಗದಲ್ಲಿ 24 ಕಡೆ ಜಲ ವಿದ್ಯುತ್ ಯೋಜನೆ ಕಾಮಗಾರಿ ನಡೆಯುತ್ತಿದ್ದವು. ಸಿಡಿಮದ್ದು ಸಿಡಿತದಿಂದ ಪ್ರಾಣಿಗಳು ಚದುರಿ ದೂರ ದೂರ ಓಡುತ್ತಿದ್ದವು. ಜಲವಿದ್ಯುತ್ ಯೋಜನೆ ನಿಲ್ಲಿಸಬೇಕೆಂದು ಅಂದಿನ ಸಿಎಂ, ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದೆವು. ಆದರೆ ಯಾವುದೇ ಪ್ರಯೋಜನ ಆಗದ ಕಾರಣ 2010ರಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆವು. ವಿಚಾರಣೆ ನಡೆಸಿದ ಕೋರ್ಟ್, 18ವಿದ್ಯುತ್ ಯೋಜನೆ ಸ್ಥಗಿತಗೊಳಿಸಲು ಆದೇಶ ನೀಡಿತು. ನಂತರ ಮರದ ಕೈಗಾರಿಕೆ ಸಾಮಿಲ್, ಪ್ಲೇವುಡ್ ಫ್ಯಾಕ್ಟರಿ ಹಾಗೂ ಇತರ ಮರದ ಉತ್ಪನ್ನಗಳ ಬಗ್ಗೆ ತಂಡ ಅಧ್ಯಯನ ಮಾಡಿದಾಗ ಲೈಸೆನ್ಸ್ ಪಡೆದು ಅರಣ್ಯದಲ್ಲಿರುವ ಮರಗಳನ್ನ ಬಳಕೆ ಮಾಡುವ ಕಾರ್ಖಾನೆಗಳು, ಲೈಸೆನ್ಸ್ ಪಡೆಯದೆ ಅರಣ್ಯದಲ್ಲಿರುವ ಮರಗಳನ್ನ ಬಳಕೆ ಮಾಡುವ ಕಾರ್ಖಾನೆಗಳು ನಡೆಯುತ್ತಿರುವುದು ಗೊತ್ತಾಯಿತು ಎಂದರು.

ಅಕ್ರಮ ಕಾರ್ಖಾನೆಗಳಿಗೆ ಪ್ರತಿದಿನ 1 ಸಾವಿರ ಲೋಡ್ ಮರ ಪೂರೈಕೆ ಮಾಡಲಾಗುತ್ತಿದೆ. ಇದನ್ನು ತಡೆಯಲು ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಅರಣ್ಯ ಮಂತ್ರಿ ಈಶ್ವರ ಖಂಡ್ರೆ ಅವರನ್ನು ಖುದ್ದಾಗಿ ಭೇಡಿ ಮಾಡಿ, ಮನವಿ ಮಾಡಿ, ಅಕ್ರಮ ತಡೆಯಿರಿ, ಕಾಡು ಉಳಿಸಿ ಎಂದು ಮನವಿ ಮಾಡಿದೆವು. ವರ್ಷ ಕಳೆದರೂ ನಮ್ಮ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ರೈತ ಸಂಘದಿಂದ ಹೈಕೋರ್ಟ್ ಮೆಟ್ಟಿಲೇರಿದ ಪರಿಣಾಮ, ಹಾಸನದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ 45 ಮರದ ಸಾಮಿಲ್‌ಗಳನ್ನು ಮುಚ್ಚುವಂತೆ ನ್ಯಾಯಾಲಯ ಆದೇಶ ನೀಡಿದೆ ಎಂದರು. ಉಳಿದವುಗಳ ಬಗ್ಗೆಯೂ ವರದಿ ಕೇಳಿದೆ. ಅಕ್ರಮ ಮರದ ಕಾರ್ಖಾನೆಗಳನ್ನು ಮುಚ್ಚಿಸಲು ಸರ್ಕಾರ ಮುಂದಾಗದಿದ್ದರೆ ಮತ್ತೊಮ್ಮೆ ಕೋರ್ಟ್ ಮೊರೆ ಹೋಗುತ್ತೇವೆ ಎಂದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಬಾಬು, ಸಂಚಾಲಕ ಮೊಹಮ್ಮದ್ ಸಾದಿಕ್, ಕಾರ್ಮಿಕ ಘಟಕದ ಅರುಣ್ ಕುಮಾರ್, ಕಲಬುರ್ಗಿಯ ಈರಣ್ಣ ಇದ್ದರು.