ಜಿಲ್ಲೆ

ಪ್ರವಾದಿ ಮಹ್ಮದ್​ರನ್ನು ನಿಂದಿಸಿದ್ದಕ್ಕೆಭಟ್ಕಳದಲ್ಲಿ ತಂಜೀಂನಿಂದ ಪ್ರತಿಭಟನೆ

ಭಟ್ಕಳ: ಪ್ರವಾದಿ ಮಹ್ಮದ್ ಅವರನ್ನು ನಿಂದಿಸಿ ಹೇಳಿಕೆಗಳನ್ನು ನೀಡಿದ ಯತಿ ನರಸಿಂಹಾನಂದ ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಭಟ್ಕಳ ತಂಜೀಂ ವತಿಯಿಂದ ತಾಲೂಕಾಡಳಿತ ಸೌಧದ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ಭಟ್ಕಳ ಎಸಿ ಡಾ. ನಯನಾ ಮೂಲಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
ಯತಿ ನರಸಿಂಹಾನಂದ ಅವರು ಪ್ರವಾದಿ ಮಹ್ಮದ್ ಅವರ ಬಗ್ಗೆ ಅವಹೇಳನಕಾರಿ ಪದ ಬಳಸಿ ದೇಶದ 20 ಕೋಟಿಗೂ ಅಧಿಕ ಸಂಖ್ಯೆಯ ಮುಸ್ಲಿಮರ ಭಾವನೆಗೆ ಧಕ್ಕೆ ತಂದಿದ್ದಾರೆ.
ದೇಶದಲ್ಲಿ ಪ್ರವಾದಿ ಮಹ್ಮದ್ ಅವರನ್ನು ಮುಸ್ಲಿಮರು ಮಾತ್ರವಲ್ಲದೆ, ಹಿಂದು, ಕ್ರಿಶ್ಚಿಯನ್ನರು ಕೂಡ ಅವರನ್ನು ಪೂಜ್ಯ ಭಾವನೆಯಿಂದ ನೋಡುತ್ತಾರೆ. ಇಂತಹ ಸನ್ನಿವೇಶದಲ್ಲಿ ಯತಿ ನರಸಿಂಹಾನಂದ ಅವರು ಹಿಂಸಾಚಾರ, ಕೋಮು ಸೌಹಾರ್ದ ಭಂಗಗೊಳಿಸಿ ದ್ವೇಷವನ್ನು ಪ್ರಚೋದಿಸುವ ಹೇಳಿಕೆ ನೀಡಿ ಧರ್ಮನಿಂದನೆ ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜೊತೆಗೆ ದೇಶದ ಹೈಕೋರ್ಟ್ ಕೂಡ ಇದನ್ನು ಗಂಭಿರವಾಗಿ ಪರಿಗಣಿಸಿ ಇಂತಹ ದುಷ್ಟ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಮುಂದೆ ಯಾವುದೇ ಧರ್ಮದ ಬಗ್ಗೆ ಇಂತಹವರು ಅವಹೇಳನಕಾರಿ ಪದ ಬಳಸದಂತೆ ನಿರ್ಬಂಧ ವಿಧಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಇದಕ್ಕೂ ಪೂರ್ವ ತಂಜೀಂ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಮೌಲಾನಾ ಇಲಿಯಾಸ್ ನದ್ವಿ ಅವರು ಪ್ರವಾದಿ ಮಹ್ಮದ್ ಪೈಗಂಬರರು ಮುಸ್ಲಿಮರಿಗಷ್ಟೇ ಸೀಮಿತರಾಗದೇ ಎಲ್ಲ ಸಮುದಾಯದವರ ಬಗ್ಗೆ ಹೋರಾಟ ಮಾಡುವ ಜತೆಗೆ ಕಾಳಜಿ ಹೊಂದಿದ್ದರು. ಇವರ ಸ್ವಭಾವದ ಬಗ್ಗೆ ಸ್ವಾಮಿ ನರಸಿಂಹಾನಂದ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದು ತೀರಾ ಖಂಡನೀಯ. ಇವರ ಅವಹೇಳನಕಾರಿ ಮಾತುಗಳಿಂದ ಮುಸ್ಲಿಂ ಸಮುದಾಯ ಸೇರಿ ಎಲ್ಲ ಸಮುದಾಯದವರಿಗೂ ನೋವಾಗಿದ್ದು ಇದನ್ನು ಖಂಡಿಸಿದ್ದಾರೆ. ಈ ಹಿಂದೆ ಪ್ರವಾದಿಯ ಬಗ್ಗೆ ಅವಹೇಳನಕಾರಿ ಮಾತನಾಡಿ ಜೈಲಿಗೆ ಹೋಗಿ ಬಂದಿದ್ದ ಸ್ವಾಮಿ ನರಸಿಂಹಾನಂದರು ಇದೀಗ ಮತ್ತೆ ಪ್ರವಾದಿ ಮಹ್ಮದ್ ಅವರ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿ ದೇಶದಲ್ಲಿ ಶಾಂತಿ, ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ಹುನ್ನಾರ ಮಾಡಿದ್ದಾರೆ. ಪ್ರವಾದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಮುಸ್ಲಿಮರ ಮನನೋಯಿಸಿದ ಸ್ವಾಮಿ ನರಸಿಂಹಾನಂದ ಅವರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ತಂಜೀಂ ಅಧ್ಯಕ್ಷ ಇನಾಯಿತ್​ಉಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ಜಾಮೀಯಾ ಇಸ್ಲಾಮಿಯಾದ ಶಿಕ್ಷಕ ಸೈಯದ್ ಇಬ್ರಾಹಿಂ, ಪುರಸಭೆ ಉಪಾಧ್ಯಕ್ಷ ಅಲ್ತಾಫ್ ಖರೂರಿ, ಮೌಲಾನಾ ಅನ್ಸಾರ್ ಮದನಿ, ಮೊಹ್ಮದ್ ಹಾಸೀಂ ಕೋಲಾ, ಮೌಲಾನ್ ಹುಸೈನ್ ಜುಕಾಕು, ಮೌಲಾನಾ ಉಸ್ಮಾನ ಸಿದ್ದೀಕ್, ಮೌಲ್ವಿ ಅಂಜುಮ್ ಗಂಗಾವತಿ, ಇಕ್ಬಾಲ್ ಸುಹೈಲ್, ಇತರರಿದ್ದರು.

ಭಟ್ಕಳ ಬಂದ್ ಇಂದು
ಭಟ್ಕಳ: ಇಸ್ಲಾಂ ಧರ್ಮದ ಸಂಸ್ಥಾಪಕ ಮಹ್ಮದ್ ಪೈಗಂಬರ್ ವಿರುದ್ಧ ಉತ್ತರ ಪ್ರದೇಶದ ದಾಸ್ನಾ ದೇವಿ ದೇವಸ್ಥಾನದ ಪೀಠಾಧಿಪತಿ ಯತಿ ನರಸಿಂಹಾನಂದ ಸ್ವಾಮೀಜಿ ಹೇಳಿಕೆ ಖಂಡಿಸಿ ಭಟ್ಕಳ ತಂಜೀಂ ವತಿಯಿಂದ ಅ. 15 ರಂದು ಭಟ್ಕಳ ಬಂದ್​ಗೆ ಕರೆ ನೀಡಲಾಗಿದೆ ಎಂದು ಭಟ್ಕಳ ತಂಜೀಂ ಸಂಸ್ಥೆ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ನರಸಿಂಹಾನಂದ ಸ್ವಾಮೀಜಿ ಹೇಳಿಕೆ ಖಂಡಿಸಿ ಸೋಮವಾರ ಬೆಳಗ್ಗೆ ಭಟ್ಕಳ ತಂಜೀಂ ಸಂಸ್ಥೆ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ ನೇತೃತ್ವದಲ್ಲಿ ಭಟ್ಕಳ ನಗರ ಠಾಣೆಗೆ ತೆರಳಿ ಇಸ್ಲಾಂ ಧರ್ಮದ ಸಂಸ್ಥಾಪಕ ಮಹ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಉತ್ತರ ಪ್ರದೇಶದ ಯತಿ ನರಸಿಂಹಾನಂದ ಸ್ವಾಮೀಜಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.