ಹೊಳೆನರಸೀಪುರ ತಾಲೂಕಿನ ಐಚನಹಳ್ಳಿ ಗ್ರಾಮಸ್ಥರು ಕುಡಿಯುವ ನೀರನ್ನು ಪೂರೈಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು. ಚಂದ್ರಶೇಖರ್, ಆನಂದ, ಸಾಕಮ್ಮ, ರಾಜಾಮಣಿ, ರಾಜು, ಸ್ವಾಮಿ ಭಾಗವಹಿಸಿದ್ದರು. 
ಜಿಲ್ಲೆ

ನೀರಿಗಾಗಿ ಖಾಲಿ ಕೊಡ ಹಿಡಿದು ಪ್ರತಿಭಟನೆ

ನಾಗೇಶ ಎಸ್

ಹೊಳೆನರಸೀಪುರ: ತಾಲೂಕಿನ ಐಚನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದ್ದು, ಗ್ರಾಮಸ್ಥರು ಗ್ರಾಮ ಪಂಚಾಯಿತಿ ಮುಂದೆ ಶನಿವಾರ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.

ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕೆಲವು ದಿನಗಳಿಂದ ತೀವ್ರವಾಗಿದ್ದು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಈ ಬಗ್ಗೆ ಹಲವು ಬಾರಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನೀರಿಗಾಗಿ ಪರಿತಪಿಸಬೇಕಾಗಿದೆ. ಗ್ರಾಮದ ಜನರಿಗೆ ನೀರು ಪೂರೈಸುವಂತೆ ಮನವಿ ಮಾಡಿದರೂ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮದ ಜನರು ದೂರಿದ್ದಾರೆ.

ಕುಡಿಯುವ ನೀರು ಪೂರೈಸದಿದ್ದರೆ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆಗೆ ಕೂರುತ್ತೇವೆ ಎಂದು ಎಚ್ಚರಿಸಿದ್ದಾರೆ. ಪ್ರತಿಭಟನೆಯಲ್ಲಿ ಗ್ರಾಮದ ಚಂದ್ರಶೇಖರ್, ಆನಂದ, ಸಾಕಮ್ಮ, ರಾಜಾಮಣಿ, ರಾಜು, ಸ್ವಾಮಿ ಭಾಗವಹಿಸಿದ್ದರು.