ಮುಂಡರಗಿ: ಕಪ್ಪತಗುಡ್ಡ ವನ್ಯಜೀವಿಧಾಮ ಅರಣ್ಯ ಪ್ರದೇಶದ 10 ಕಿ.ಮೀ ವ್ಯಾಪ್ತಿಯನ್ನು ಸೂಕ್ಷ್ಮ ಅರಣ್ಯ ಪ್ರದೇಶವಾಗಿದ್ದರೂ ಅದನ್ನು 1 ಕಿ.ಮೀ.ಗೆ ಕಡಿತಗೊಳಿಸಲು ಹೊರಟಿರುವ ಸರ್ಕಾರದ ನೀತಿ ತೀವ್ರ ಖಂಡನೀಯ. ಬಂಡವಾಳ ಶಾಹಿಗಳು ಕಪ್ಪತಗುಡ್ಡದ ಖನಿಜ ಸಂಪತ್ತನ್ನು ಕಬಳಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ನಮ್ಮ ಪ್ರಾಣವನ್ನು ಬಿಡುತ್ತೇವೆ ಹೊರತು ಈ ಭಾಗದ ಜನರ ಜೀವನಾಡಿಯಾಗಿರುವ ಕಪ್ಪತಗುಡ್ಡವನ್ನು ಯಾವುದೆ ಕಾರಣಕ್ಕೂ ಬಿಡುವುದಿಲ್ಲ ಎಂದು ತಾಲೂಕು ಅಭಿವೃದ್ದಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಹೇಳಿದರು.
ಪಟ್ಟಣದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠ, ಕಪ್ಪತಗುಡ್ಡ ಸಂರಕ್ಷಣಾ ಸಂಘ, ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಶುಕ್ರವಾರ ಕಪ್ಪತಗುಡ್ಡ ಉಳಿಸಿ ಸಹಿ ಸಂಗ್ರಹ ಚಳವಳಿಯಲ್ಲಿ ಅವರು ಮಾತನಾಡಿದರು.
ಕಪ್ಪತಗುಡ್ಡ ಉತ್ತರ ಕರ್ನಾಟಕದ ಸಹ್ಯಾದ್ರಿ, ಔಷಧೀಯ ಸಸ್ಯಕಾಶಿ, ಏಷ್ಯಾ ಖಂಡದಲ್ಲಿಯೇ ಶುದ್ದ ಗಾಳಿ ನೀಡುವ ಪ್ರದೇಶ ಎಂಬ ಹೆಗ್ಗಳಿಕೆ ಕಪ್ಪತಗುಡ್ಡಕ್ಕಿದೆ. ಬಂಡವಾಳಶಾಹಿ ಗಣಿಕುಳಗಳ ಒತ್ತಡಕ್ಕೆ ಮಣಿದು 10 ಕಿ.ಮೀ ವ್ಯಾಪ್ತಿ ಪ್ರದೇಶವನ್ನು ಕಡಿತಗೊಳಿಸಿ 1ಕಿ.ಮೀಗೆ ಮಿತಿಗೊಳಿಸಲು ಹೊರಟಿರುವ ಸರ್ಕಾರದ ನೀತಿಯನ್ನು ಖಂಡಿಸುತ್ತೇವೆ. ಕೇಂದ್ರ ಸರ್ಕಾರವು ಇದನ್ನು ಜಾರಿಗೆ ತರಬಾರದು. ಅನೇಕ ಹೋರಾಟಗಳಿಂದ ಕಪ್ಪತಗುಡ್ಡವನ್ನು ಉಳಿಸಿಕೊಂಡು ಬಂದಿದ್ದೇವೆ. 10 ಕಿ.ಮೀ ವ್ಯಾಪ್ತಿ ಪ್ರದೇಶವನ್ನು 1 ಕಿ.ಮೀಗೆ ಕಡಿತಗೊಳಿಸುವುದು ತಕ್ಷಣವೇ ಕೈಬಿಡಬೇಕು. ಇಲ್ಲದಿದ್ದರೆ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಾಡೋಜ ಡಾ. ಅನ್ನದಾನೀಶ್ವರ ಶಿವಯೋಗಿಗಳು ಶುಕ್ರವಾರದ ಮೌನವಿದ್ದ ಕಾರಣ ಅವರ ಪರವಾಗಿ ಎಸ್.ಬಿ.ಎಸ್ ಆಯುರ್ವೇದ ಮೆಡಿಕಲ್ ಕಾಲೇಜ್ ಸಂಸ್ಥಾಪಕ ಅಧ್ಯಕ್ಷ ಗುರುಮೂರ್ತಿಸ್ವಾಮಿ ಇನಾಮದಾರ ಮಾತನಾಡಿ, ‘ಕಪ್ಪತಗುಡ್ಡ ಉತ್ತರ ಕರ್ನಾಟಕದ ಜೀವನಾಡಿ. ಅದಕ್ಕೆ ಗಣಿಗಾರಿಕೆ ಸಂಕಷ್ಟ ಪದೇಪದೆ ಎದುರಾಗುತ್ತಿದೆ. ಕಪ್ಪತಗುಡ್ಡ ಬೆಳೆಯಲು ಬಿಡಬೇಕು ವಿನಃ ಅದನ್ನು ಹಾಳುಮಾಡುವ ಕೆಲಸ ಮಾಡಬಾರದು’ ಎಂದರು.
ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಕಪ್ಪತಗುಡ್ಡ ಸಂರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಎಸ್.ಅರಸನಾಳ, ಚನ್ನಬಸಪ್ಪ ಗಣಪ್ಪನವರ ಮಾತನಾಡಿದರು. ಉಪ ತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ ಮನವಿ ಸ್ವೀಕರಿಸಿದರು. ಈಶ್ವರಪ್ಪ ಹಂಚಿನಾಳ, ಕರಬಸಪ್ಪ ಹಂಚಿನಾಳ, ಆನಂದಗೌಡ ಪಾಟೀಲ, ದೇವಪ್ಪ ಇಟಗಿ, ಎನ್.ಎಫ್. ಅಕ್ಕೂರ, ಕೊಟ್ರೇಶ ಅಂಗಡಿ, ಡಿ.ಡಿ. ಮೋರನಾಳ, ಮಂಜುನಾಥ ಮುಧೋಳ, ನಾಗರಾಜ ಮುರಡಿ, ನಾಗರಾಜ ಕೊರ್ಲಹಳ್ಳಿ, ಪವನ ಚೋಪ್ರಾ, ಈರಣ್ಣ ತುಪ್ಪದ, ಅಡಿವೆಪ್ಪ ಚಲವಾದಿ, ಆರ್.ವೈ. ಪಾಟೀಲ, ಪರುಶುರಾಮ ಸುಣಗಾರ, ಆರ್.ಎಂ. ತಪ್ಪಡಿ, ಬಿ.ಎಸ್. ಜೋಗಿನ, ಎಸ್.ಬಿ.ಎಸ್ ಆಯುರ್ವೇದ ಮೆಡಿಕಲ್ ಕಾಲೇಜ್ ಹಾಗೂ ಜಗದ್ಗುರು ಅನ್ನದಾನೀಶ್ವರ ಪದವಿ ಪೂರ್ವ ಕಾಲೇಜ್‌ನ ವಿದ್ಯಾರ್ಥಿಗಳು ಮತ್ತಿತರರು ಇದ್ದರು.
500ಕ್ಕೂ ಹೆಚ್ಚು ಜನರ ಬೆಂಬಲ
ಕಪ್ಪತಗುಡ್ಡ ಉಳಿಸಿ ಸಹಿ ಸಂಗ್ರಹ ಚಳವಳಿಯಲ್ಲಿ ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಪ್ರಥಮ ಸಹಿ ಮಾಡುವುದರ ಮೂಲಕ ಸಹಿ ಸಂಗ್ರಹಕ್ಕೆ ಚಾಲನೆ ನೀಡಿದರು. ಸುಮಾರು 500ಕ್ಕೂ ಹೆಚ್ಚು ಜನರು ಸಹಿ ಮಾಡುವ ಮೂಲಕ ಕಪ್ಪತಗುಡ್ಡದ ಮೇಲಿರುವ ಪ್ರೀತಿ ವ್ಯಕ್ತಪಡಿಸಿದರು.