ಜಿಲ್ಲೆ

ಇಂದಿರಾ ಕ್ಯಾಂಟೀನ್ ಗಾಗಿ ಸ್ಥಳಿಯರ ಪ್ರತಿಭಟನೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಮಂಟೂರ ರಸ್ತೆ ಹರಿಶ್ಚಂದ್ರ ಕಾಲನಿ ಬಳಿ ಇಂದಿರಾ ಕ್ಯಾಂಟೀನ್ ಸ್ಥಾಪಿಸುವಂತೆ ಸ್ಥಳಿಯರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಈ ಭಾಗದಲ್ಲಿ ನಿತ್ಯ ದುಡಿದು ತಿನ್ನುವವರು ಹೆಚ್ಚಾಗಿದ್ದಾರೆ. ಇಲ್ಲಿ ಕ್ಯಾಂಟೀನ್ ಆರಂಭಿಸುವಂತೆ ಶಾಸಕರಿಗೆ ಬಹಳಷ್ಟು ಬಾರಿ ಮನವಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕ್ಯಾಂಟೀನ್ ಕಾಮಗಾರಿ ಆರಂಭವಾಗಿದೆ. ಆದರೆ, ಇದಕ್ಕೆ ಬಿಜೆಪಿ ಹಾಗೂ ಶ್ರೀರಾಮ ಸೇನೆಯವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶಾಸಕರ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ವಿರೋಧಕ್ಕೂ ಮಣಿಯದೇ ಪಾಲಿಕೆ ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ಆರಂಭ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಶಿವಾನಂದ ಮುತ್ತಣ್ಣವರ, ಶ್ಯಾಮ ಜಾಧವ, ಪಂಪಣ್ಣ ಅಂಬಿಗೇರ, ಶ್ರೀನಿವಾಸ ಬೆಳದಡಿ, ರಜನಿಕಾಂತ ಬಿಜವಾಡ, ಶಂಕರ ಅಜಮನಿ, ಪ್ರಕಾಶ ಹುಬ್ಬಳ್ಳಿ, ಶ್ರೀಕಾಂತ ಮದರಕರ್, ಚೇತನ ಬಿಜವಾಡ, ಇತರರು ಪಾಲ್ಗೊಂಡಿದ್ದರು.

ಸರ್ಕಾರಿ ಆದೇಶವಿದೆ:
ಕೆರೆ ಹಾಗೂ ಉದ್ಯಾನ ಹೊರತು ಪಡಿಸಿ ಯಾವುದೇ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿಮಿರ್ಸಲು 2017ರಲ್ಲಿ ಸರ್ಕಾರ ಆದೇಶ ಮಾಡಿದೆ. ನಗರಾಭಿವೃದ್ಧಿ ಯೋಜನಾ ಇಲಾಖೆ ಇಂದಿರಾ ಕ್ಯಾಂಟೀನ್ ಸ್ಮಶಾನ ಜಾಗದಲ್ಲಿ ನಿಮಿರ್ಸಿದೆ. ಇದಕ್ಕೆ ಪರ ಹಾಗೂ ವಿರೋಧ ಮನವಿ ಸಲ್ಲಿಕೆಯಾಗಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

ಈ ವಿಚಾರವಾಗಿ ಕಾನೂನು ಸುವ್ಯವಸ್ಥೆ ಹಾಳಾಗದಂತೆ ಕ್ರಮ ವಹಿಸಲಾಗುವುದು. ಇಂದಿರಾ ಕ್ಯಾಂಟೀನ್ ತೆರವುಗೊಳಿಸುವ ಬಗ್ಗೆ ಕೆಲ ಸಂಘಟನೆಗಳು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಭದ್ರತೆಗೆ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.