ಜಿಲ್ಲೆ

ಏಕ ವಿನ್ಯಾಸ ನಕ್ಷೆಯಲ್ಲಿ ಗೊಂದಲ ಬಗ್ಗೆ ಹೈಕೋರ್ಟ್​ನಲ್ಲಿ ದಾವೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಗ್ರಾಪಂಗಳಲ್ಲಿ ಹೊಸ ಹುದ್ದೆಗೆ ಅಥವಾ ತೆರವಾದ ಹುದ್ದೆಗಳಿಗೆ ಯಾವುದೇ ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಯುತ್ತಿಲ್ಲ. ಜಿಪಂ ಸಿಇಒ ಪೂರ್ವಾನುಮೋದನೆಯೊಂದಿಗೆ ನೇಮಕಾತಿ ನಡೆಯಬೇಕು. ಈ ಹಿಂದಿನಂತೆ 25 ಸೆಂಟ್ಸ್​ ವಿಸ್ತೀರ್ಣದವರೆಗಿನ ಏಕ ನಿವೇಶನ ವಿನ್ಯಾಸಗಳಿಗೆ ಅನುಮೋದನೆ ನೀಡುವ ಅಧಿಕಾರ ಗ್ರಾಪಂಗೆ ವಹಿಸಬೇಕು ಎಂದು ಕುಂದಾಪುರ ತಾಲೂಕು ಪಂಚಾಯತ್​ರಾಜ್​ ಒಕ್ಕೂಟದ ಅಧ್ಯಕ್ಷ ಉದಯಕುಮಾರ್​ ಶೆಟ್ಟಿ ಆಗ್ರಹಿಸಿದರು.

ಮಂಗಳವಾರ ಜಿಲ್ಲಾಡಳಿತ ಕಚೇರಿ ಮುಂಭಾಗ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಹಕ್ಕೊತ್ತಾಯ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಸರ್ಕಾರ ಹೊರಡಿಸುವ ಸುತ್ತೋಲೆ, ಆದೇಶಗಳು ಪಂಚಾಯತ್​ ರಾಜ್​ ವ್ಯವಸ್ಥೆಯ ಒಂದೊಂದೇ ಕಲ್ಲುಗಳನ್ನು ಬೀಳಿಸುತ್ತಿದೆ. ಈ ಬಗ್ಗೆ ಚುನಾಯಿತ ಪ್ರತಿನಿಧಿಗಳು ಧ್ವನಿ ಎತ್ತಬೇಕು. ಗ್ರಾಪಂ ಸಿಬ್ಬಂದಿ ನೇಮಕಾತಿ ಮತ್ತು ಏಕ ವಿನ್ಯಾಸ ನಕ್ಷೆಯಲ್ಲಿ ಇರುವ ಗೊಂದಲಗಳ ಕುರಿತು ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಲು ಒಕ್ಕೂಟ ನಿರ್ಧರಿಸಿರುವುದಾಗಿ ತಿಳಿಸಿದರು.

ವಿವಿಧ ಗ್ರಾಮ ಪಂಚಾಯಿತಿ ಪ್ರತಿನಿಧಿಗಳಾದ ಬಿ. ದಿನಕರ ಶೆಟ್ಟಿ ಬಸ್ರೂರು, ಬಸವ ಪಿ. ಮೊಗವೀರ ಹಕ್ಲಾಡಿ, ಎಚ್​. ಪ್ರಕಾಶ್​ ಶೆಟ್ಟಿ ಯಡ್ತಾಡಿ, ಇಂದಿರಾ ಶೆಟ್ಟಿ ಮೊಳಹಳ್ಳಿ, ಚಂದ್ರಿಕಾ ಮೊಳಹಳ್ಳಿ, ಮೋಹನ್​ಚಂದ್ರ ಉಪ್ಪುಂದ, ರಮೇಶ್​ ಶೆಟ್ಟಿ ಕಾಳಾವರ, ಜಿ. ಮಂಜುನಾಥ್​ ಹಟ್ಟಿಯಂಗಡಿ, ಉದಯಕುಮಾರ್​ ತಲ್ಲೂರು ಉಪಸ್ಥಿತರಿದ್ದರು.

ಪ್ರತಿಭಟನೆಯಲ್ಲಿ ಕುಂದಾಫುರ, ಬೈಂದೂರು, ಉಡುಪಿ, ಹೆಬ್ರಿ, ಬ್ರಹ್ಮಾವರ, ಕಾಪು ತಾಲೂಕುಗಳ ಗ್ರಾಮ ಪಂಚಾಯಿತಿಗಳಿಂದ ಸುಮಾರು 300 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಹಕ್ಕೊತ್ತಾಯ ಆಂದೋಲನ ಸಮಿತಿ ಸದಸ್ಯ ಶ್ರೀನಿವಾಸ ಗಾಣಿಗ ಕಾರ್ಯಕ್ರಮ ನಿರ್ವಹಿಸಿ, ಕೃಪಾ ಎಂ.ಎಂ. ಸಹಕರಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಗ್ರಾಪಂ ಸದಸ್ಯರ ಮನವಿ ಸ್ವೀಕರಿಸಿದರು. ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅವರ ಮೂಲಕ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್​ ಇಲಾಖೆ ಸಚಿವರಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಲಾಯಿತು.