ಮಡಿಕೇರಿ: ಭೂ ಗುತ್ತಿಗೆ ಆದೇಶವನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಭೂ ಗುತ್ತಿಗೆ ವಿರೋಧಿ ಹೋರಾಟ ಸಮಿತಿ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಫೀ.ಮಾ ಕೆ.ಎಂ.ಕಾರ್ಯಪ್ಪ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಜನರಲ್ ತಿಮ್ಮಯ್ಯ ವೃತ್ತಕ್ಕಾಗಿ ಸಾಗಿ ಜಿಲ್ಲಾಡಳಿತ ಭವನ ತಲುಪಿತು. ೬೦೦ ಹೆಚ್ಚು ದಲಿತ ಆದಿವಾಸಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಭೂಗುತ್ತಿಗೆ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಡಿ.ಎಸ್.ನಿರ್ವಾಣಪ್ಪ, ಉಳ್ಳವರು ಒತ್ತುವರಿ ಮಾಡಿರುವ ಸರ್ಕಾರಿ ಜಾಗದಲ್ಲಿ ೨೫ ಎಕರೆವರೆಗೆ ಗುತ್ತಿಗೆ ಆಧಾರದಲ್ಲಿ ಅವರಿಗೇ ಬಿಟ್ಟುಕೊಡುವ ಭೂಗುತ್ತಿಗೆ ನೀತಿ ಖಂಡನೀಯ. ಭೂಗುತ್ತಿಗೆ ನೀಡಿದ ಜಾಗವನ್ನು ಸರ್ಕಾರ ವಶಕ್ಕೆ ಪಡೆದು ಬಡವರಿಗೆ, ದಲಿತ ಆದಿವಾಸಿಗಳಿಗೆ ನೀಡಬೇಕು. ಬಡವರು, ಮಧ್ಯಮ ವರ್ಗದವರ ಸಾಗುವಳಿಗೆ ಹಕ್ಕುಪತ್ರ ನೀಡಬೇಕು. ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬಡವರ ನಿವೇಶನಕ್ಕೆ ಜಾಗ ಕಾಯ್ದಿರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ತುಂಡು ಭೂಮಿಯೂ ಇಲ್ಲದೆ ಸುಮಾರು ೫ ಸಾವಿರ ಆದಿವಾಸಿಗಳು ಲೈನ್‌ಮನೆಗಳಲ್ಲಿ ವಾಸವಿದ್ದಾರೆ. ಹೀಗಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳಿಗೆ ಬಡವರ ಮೇಲೆ ಕಾಳಜಿ ಇಲ್ಲದಾಗಿದೆ. ಅವರು ಭೂಮಾಲೀಕರ ಪರ ನಿಂತಿದ್ದಾರೆ ಎಂದು ಆರೋಪಿಸಿದ ನಿರ್ವಾಣಪ್ಪ, ಭೂಗುತ್ತಿಗೆ ನೀತಿಯನ್ನು ಸರ್ಕಾರ ಹಿಂಪಡೆದು ಭೂಹೀನರಿಗೆ, ನಿರಾಶ್ರಿತರಿಗೆ ಭೂಮಿಯನ್ನು ಹಂಚಬೇಕು. ಜಿಲ್ಲೆಯ ಶಾಸಕದ್ವಯರು ಬಡವರ ಸಮಸ್ಯೆಗೆ ಸ್ಪಂದಿಸದೇ ಇದ್ದಲ್ಲಿ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಾರ್ಮಿಕ ಮುಖಂಡ ಭರತ್ ಮಾತನಾಡಿ, ಬಡವರಿಗೆ ಭೂಮಿ ನೀಡುವಂತೆ ಹತ್ತಾರು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಸರ್ಕಾರಕ್ಕೆ ಬಡವರ, ಆದಿವಾಸಿಗಳ ಕೂಗು ಕೇಳಿಸುತ್ತಿಲ್ಲ. ಜಿಲ್ಲೆಯಲ್ಲಿರುವ ನೂರಾರು ಎಕರೆ ಪೈಸಾರಿ ಜಾಗವನ್ನು ಬಡವರಿಗೆ ಹಂಚುವ ಬದಲು, ಉಳ್ಳವರಿಗೆ ಅತೀ ಕಡಿಮೆ ಬೆಲೆಗೆ ಗುತ್ತಿಗೆ ನೀಡುವುದು ಖಂಡನೀಯ. ಗುತ್ತಿಗೆ ಪದ್ಧತಿಯನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಸಂಚಾಲಕರಾದ ಮೊಣ್ಣಪ್ಪ, ರಮೇಶ್ ಮಾಯಮುಡಿ, ಸಿಪಿಐಎಂ ರಮೇಶ್, ಎಚ್.ಈ.ಸಣ್ಣಪ್ಪ, ದಸಂಸ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್, ಸಂಘಟನಾ ಸಂಚಾಲಕ ಡಿ.ಜೆ.ಈರಪ್ಪ, ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.