ಹುನಗುಂದ: ಪುರಸಭೆಯವರು ಒಂದು ವಾರದಿಂದ ಕುಡಿಯುವ ನೀರನ್ನು ಸರಿಯಾಗಿ ಪೂರೈಸುತ್ತಿಲ್ಲ ಎಂದು ಆಗ್ರಹಿಸಿ ಪಟ್ಟಣದ ಕುಂಬಾರ ಓಣಿ, 1 ಮತ್ತು 23 ನೇ ವಾರ್ಡ್‌ನ ನಿವಾಸಿಗಳು ಮೇನ್ ಬಜಾರ್ ಮುಖ್ಯ ರಸ್ತೆ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.
ಹಿರಿಯ ಮುಖಂಡ ಅರುಣೋದಯ ದುದ್ಗಿ ಮಾತನಾಡಿ, ಪಟ್ಟಣದ ಬೇರೆ ವಾರ್ಡ್‌ಗಳಲ್ಲಿ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ನಮ್ಮ ವಾರ್ಡ್‌ಗಳಿಗೆ ಮಾತ್ರ ಸರಬರಾಜು ಮಾಡುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಈ ಬಗ್ಗೆ ಹಲವುಬಾರಿ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕನಿಷ್ಠ ಎರಡು ದಿನಕ್ಕೆ ಒಂದು ಬಾರಿಯಂತೆ ನೀರು ಬಿಡುವ ವ್ಯವಸ್ಥೆ ಮಾಡಬೇಕು. ಪುರಸಭೆ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ್ದ ಪುರಸಭೆ ನೀರು ಸರಬರಾಜು ಸಿಬ್ಬಂದಿ ಮಹಾಂತೇಶ ತಾರಿವಾಳ ಮಾತನಾಡಿ, ನೀರು ಸರಬರಾಜು ಮೋಟರ್ ದುರಸ್ಥಿಯಿಂದ ಸಮಸ್ಯೆ ಉಂಟಾಗಿದೆ. ಶ್ರೀಘ್ರವೇ ಸಮಸ್ಯೆ ಪರಿಹರಿಸಲಾಗುವುದು. ಆದ್ದರಿಂದ ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು.
ಬಡಾವಣೆಯ ನಿವಾಸಿಗಳಾದ ಅಮರೇಶ ಕರಂಡಿ, ಶಿವಪ್ಪ ಗದ್ದಿ,ಪುಲಕೇಶಿ ನೆರಬೆಂಚಿ, ವಿನೋದ ಕುಂಬಾರ, ಮಲ್ಲಯ್ಯ ಕೆಲೂರ, ಶರಣು ಚಿತ್ತವಾಡಗಿ, ಮಹಾಂತೇಶ ಕಂಬಾಳಿಮಠ, ಮಹೇಶ ಗಂಗೂರ, ಬಾಬು ಇದ್ದಲಗಿ, ಮಂಜು ಸೊಪ್ಪರದ ಮತ್ತಿತರರಿದ್ದರು.