ಜಿಲ್ಲೆ

ನೀರು ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

Gadag

ಗದಗ: ಕುಡಿಯುವ ನೀರು ಪೂರೈಸಬೇಕೆಂದು ಒತ್ತಾಯಿಸಿ ನಗರದ 35ನೇ ವಾರ್ಡ್​ನ ಹುಡ್ಕೋ ಕಾಲನಿ ನಾಗರಿಕರು ಸೋಮವಾರ ಪ್ರತಿಭಟನೆ ನಡೆಸಿದರು. ಕಳೆದ ಎರಡು ದಿನಗಳಿಂದ ವಾರ್ಡ್​ಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡದಿರುವ ಹಿನ್ನೆಲೆಯಲ್ಲಿ ಹಲವಾರು ಮಹಿಳೆಯರು ಖಾಲಿ ಕೊಡಗಳೊಂದಿಗೆ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ವೃದ್ಧೆಯೊಬ್ಬರು ತೀವ್ರ ತರಾಟೆಗೆ ತೆಗೆದುಕೊಂಡರು. ಬೇಸಿಗೆ ಶುರುವಾಗಿದ್ದು, ಜನರಿಗೆ ನೀರಿನ ಅವಶ್ಯಕತೆ ಹೆಚ್ಚಿರುತ್ತದೆ. ತುಂಗಭದ್ರಾ ನದಿಯಲ್ಲಿ ನೀರಿದ್ದರೂ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು.

35ನೇ ವಾರ್ಡ್​ನಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಆಗಿರುವುದು ನಿಜ. ಸಮಸ್ಯೆ ಬಗೆಹರಿಸಿ ಮಂಗಳವಾರದಿಂದ ಸಮಮರ್ಪವಾಗಿ ನೀರು ಪೂರೈಸಲಾಗುವುದು ಎಂದು ಪೌರಾಯುಕ್ತ ರಮೇಶ ಜಾಧವ ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಗಿರಿಜಾಬಾಯಿ, ಮಲ್ಲಮ್ಮ, ಇತರರಿದ್ದರು.