ಮಡಿಕೇರಿ: ಜಿಲ್ಲೆಯ ಕಾಫಿ ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಕರ್ನಾಟಕ ಕಾಫಿ ರೈತರ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಪ್ರಮುಖರಾದ ಡಾ.ಈ.ರಾ.ದುರ್ಗಾಪ್ರಸಾದ್, ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಕಾಫಿ, ಕರಿಮೆಣಸು, ಬತ್ತ, ಅಡಿಕೆ, ಏಲಕ್ಕಿ ಬೆಳೆಗಾರರಿಗೆ ಹೆಚ್ಚಿನ ನಷ್ಟ ಸಂಭವಿಸಿದೆ. ಅಡಿಕೆಗೆ ಕೊಳೆರೋಗ ತಗುಲಿ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಇಂದು ಪರಿಹಾರ ರೂಪದಲ್ಲಿ ರೂ.೧೦೦ ನಷ್ಟಕ್ಕೆ ೧ ರೂ ಪರಿಹಾರ ನೀಡುತ್ತಿದೆ. ನ್ಯಾಯುತವಾಗಿ ಪರಿಹಾರ ನೀಡುವಂತಾಗಬೇಕು ಎಂದರು.
ಕಾಫಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೆಲೆಯಿದೆ. ಆದರೆ, ಬೆಳೆಗಾರನಿಗೆ ಬೆಲೆ ಸಿಗದೇ ಮಧ್ಯವರ್ತಿಗಳ ಪಾಲಾಗುತ್ತಿದೆ. ಬೆಳೆಗಾರರಿಗಾಗುತ್ತಿರುವ ಅನ್ಯಾಯದಿಂದ ಅವರನ್ನು ರಕ್ಷಿಸಬೇಕು. ಆ ಬೆಲೆ ಬೆಳೆಗಾರರಿಗೆ ಸಿಗಬೇಕು. ಇದಕ್ಕೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು. ಅದೇ ರೀತಿ ಆನೆ ಹಾವಳಿಯಿಂದ ರೈತರ ಜೀವ, ತೋಟ ರಕ್ಷಿಸಿಕೊಡಬೇಕು ಎಂದು ಒತ್ತಾಯಿಸಿದರು.
ರೈತರ ವಶದಲ್ಲಿದ್ದು ಕೃಷಿ ಮಾಡಿಕೊಂಡು ಬರುತ್ತಿರುವ ಸಿ ಆ್ಯಂಡ್ ಡಿ ಜಾಗದಲ್ಲಿ ಬಡವರು ಜೀವಿಸುತ್ತಿದ್ದಾರೆ. ಆದರೆ, ಸರ್ಕಾರದ ಅಧಿಕಾರಿಗಳು ಕಾನೂನು ಬಾಹಿರವಾಗಿ ಸ್ವ-ಇಚ್ಚೆಯಿಂದ ಅರಣ್ಯವೆಂದು ಏಕಪಕ್ಷೀಯವಾಗಿ ಘೋಷಿಸಿ ಅದನ್ನು ಮೀಸಲು ಅರಣ್ಯವಾಗಿ ಪರಿವರ್ತಿಸುವ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಯೋಜನೆಗೆ ಕೈ ಹಾಕಿದ್ದಾರೆ. ಇದು ಸರಿಯಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಹೊರರಾಜ್ಯದವರು ಆಗಮಿಸಿ ಮರಗಿಡಗಳನ್ನು ನಾಶಪಡಿಸಿ ಸೈಟ್‌ಗಳಾಗಿ ಮಾರ್ಪಡಿಸುತ್ತಿದ್ದಾರೆ. ಇಂತವರ ವಿರುದ್ಧ ಸೂಕ್ತ ಕ್ರಮಕೈಗೊಂಡು ಅರಣ್ಯವಾಗಿ ಪರಿವರ್ತಿಸಬೇಕು. ರೈತರನ್ನು ಒಕ್ಕಲೆಬ್ಬಿಸುವ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಸರಕಾರಿ ಭೂಮಿಯನ್ನು ಕೈವಶದಲ್ಲಿರಿಸಿಕೊಂಡು ಕೃಷಿ ಮಾಡುತ್ತಿರುವ ಇತರ ಆದಾಯವಿಲ್ಲದ ರೈತರಿಗೆ ಐದು ಎಕರೆ ಜಾಗವನ್ನು ಅವರಿಗೆ ಕೊಟ್ಟು ಅವರಿಗೆ ಅದಕ್ಕೆ ಆರ್.ಟಿ.ಸಿ ಕೊಡಬೇಕು. ಕರಿಮೆಣಸು, ಅಡಿಕೆ ಆಮದಾಗುತ್ತಿರುವುದು ಮತ್ತು ಭಾರತದೊಳಕ್ಕೆ ಕಳ್ಳ ಸಾಗಣಿಗೆಯಾಗುತ್ತಿರುವುದನ್ನು ತಡೆಯಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಜಿಲ್ಲಾಡಳಿತ ಮೂಲಕ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಘಟಕದ ಸಂಚಾಲಕ ಕೆ.ಎಚ್.ಹನೀಫ್, ಮುಖಂಡರಾದ ವಸಂತ್ ಕುಮಾರ್, ನೆಲ್ಲಿಹುದಿಕೇರಿ ಉದಯ್ ಕುಮಾರ್, ಹಮೀದ್ ಇತರರಿದ್ದರು.