ಜಿಲ್ಲೆ

ಉಪನ್ಯಾಸಕರ ಕೊರತೆ ನೀಗಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮಡಿಕೇರಿ: ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ, ಅಗತ್ಯ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಆರೋಪಿಸಿ ಕಾಲೇಜು ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.


ಈ ಸಂದರ್ಭ ಮಾತನಾಡಿದ ವಿದ್ಯಾರ್ಥಿ ಪ್ರತಾಪ್ ಮಾತನಾಡಿ, ಗಣನೀಯ ಪ್ರಮಾಣದಲ್ಲಿ ಉಪನ್ಯಾಸಕರ ಕೊರತೆ ಕಾಲೇಜಿನಲ್ಲಿದೆ. ಇದರಿಂದ ಕಲಿಕೆಗೆ ಅಡ್ಡಿಯಾಗಿದೆ. ಅದರೊಂದಿಗೆ ಕಾಲೇಜು ಕಟ್ಟಡವೂ ಶಿಥಿಲ ಸ್ಥಿತಿಯಲ್ಲಿದೆ. ದಿಢೀರ್ ಆಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಅನೇಕರನ್ನು ತೆಗೆದು ಹಾಕಿದ್ದಾರೆ. ಇವೆಲ್ಲವನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.


ವಿದ್ಯಾರ್ಥಿನಿ ಸಂಗೀತಾ, ಕಾಲೇಜಿನಲ್ಲಿ ಸಮರ್ಪಕವಾಗಿ ತರಗತಿಗಳು ನಡೆಯುತ್ತಿಲ್ಲ. ಇದಕ್ಕೆ ಉಪನ್ಯಾಸಕರ ಕೊರತೆ ಕಾರಣವಾಗಿದೆ. ಕಷ್ಟಪಟ್ಟು ನಮ್ಮ ಪೋಷಕರು ಶುಲ್ಕ ಪಾವತಿಸಿ ಕಾಲೇಜು ಸೇರಿಸಿದ್ದಾರೆ. ಆದರೆ, ದಿನಕ್ಕೆ ೨-೩ ತರಗತಿ ಮಾತ್ರ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಪರೀಕ್ಷೆ ಎದುರಿಸಲು ಭಯವಾಗುತ್ತಿದೆ ಎಂದರು.


ಸಿಬ್ಬಂದಿಯೊಬ್ಬರು ಮಾತನಾಡಿ, ಹಲವು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದೇವೆ. ಆದರೆ, ಕಾಲೇಜು ಕೊಡಗು ವಿವಿಗೆ ಸಂಯೋಜನೆ ಹೊಂದಿದ ಬಳಿಕ ನಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಉತ್ತರ ಬಂದಿದೆ. ಈ ಕ್ರಮದಿಂದ ನಮ್ಮ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ನೋವು ಹೇಳಿಕೊಂಡರು.


ಕೊಡಗು ವಿವಿ ಉಪಕುಲಪತಿ ಡಾ.ಅಶೋಕ್ ಸಂಗಪ್ಪ ಅಲೂರು ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಸಮಸ್ಯೆ ಪರಿಹಾರದ ಭರವಸೆ ನೀಡಿದರು. ೮-೧೦ ದಿನಗಳಲ್ಲಿ ಉಪನ್ಯಾಸಕರ ಕೊರತೆ ನೀಗಿಸುತ್ತೇವೆ. ಉಳಿದ ಸಮಸ್ಯೆಯ ಕುರಿತು ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮತ್ತೊಂದು ಸುತ್ತಿನಲ್ಲಿ ನಿಯೋಗ ತೆರಳಿ ಸಮಸ್ಯೆಯ ಬಗ್ಗೆ ಗಮನಸೆಳೆಯುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.


ಈ ಸಂದರ್ಭ ಕುಲಸಚಿವ ಡಾ.ಸೀನಪ್ಪ, ಕಾಲೇಜು ಪ್ರಾಂಶುಪಾಲ ಮೇಜರ್ ರಾಘವ್ ಸೇರಿದಂತೆ ಉಪನ್ಯಾಸಕರು ಹಾಜರಿದ್ದರು.