ಜಿಲ್ಲೆ

ನಮೂನೆ-3 ನೀಡಲು ಆಗ್ರಹಿಸಿ ಪ್ರತಿಭಟನೆ

ವೀರೇಶ ಸೌದ್ರಿ

ಮುಂಡಗೋಡ: ಪಟ್ಟಣದ ಕಂಬಾರಗಟ್ಟಿ ಹಾಗೂ ಗಾಂಧಿನಗರ ಕೊಳಚೆ ಪ್ರದೇಶದ ನಿವಾಸಿಗಳಿಗೆ ನಮೂನೆ-3 ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ನಿವಾಸಿಗಳು ಪಟ್ಟಣ ಪಂಚಾಯಿತಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಶಿವರಾಮ ಹೆಬ್ಬಾರ ಅವರು ಎರಡು ವರ್ಷಗಳ ಹಿಂದೆ, ನಿವಾಸಿಗಳಿಗೆ ಕೊಳಚೆ ಮಂಡಳಿಯಿಂದ ಹಕ್ಕು ಪತ್ರ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿದ ಎಲ್ಲ ಹಂತವನ್ನು ಮುಗಿಸಿ ಫಲಾನುಭವಿಗಳು, ಪಟ್ಟಣ ಪಂಚಾಯಿತಿ ಆಸ್ತಿ ಪುಸ್ತಕದಲ್ಲಿ ನಮೂದಿಸಿಕೊಂಡು ನಮೂನೆ-3 ನೀಡಲು ಅರ್ಜಿ ಸಲ್ಲಿಸಿ ಸ್ವೀಕೃತಿಯನ್ನು ಪಡೆದಿದ್ದೇವೆ. ಆದರೆ ಇಂದಿನ ತನಕ ಕಂಬಾರಗಟ್ಟಿ ಕೊಳಚೆ ಪ್ರದೇಶದ ಒಬ್ಬರಿಗೂ ನಮೂನೆ-3 ನೀಡಿಲ್ಲ. ಗಾಂಧಿನಗರದ ಕೊಳಚೆ ನಿವಾಸಿಗಳಿಗೂ ಸಂಪೂರ್ಣವಾಗಿ ನೀಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಬಗ್ಗೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆಯಾದರೂ ಅಧಿಕಾರಿಗಳ ನಿರ್ಲಕ್ಷೃದಿಂದ ವಿಳಂಬವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಇಂದೇ ಎಲ್ಲರಿಗೂ ನಮೂನೆ 3 ನೀಡಬೇಕು. ಇಲ್ಲವಾದರೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದರು.

ಪ್ರತಿಭಟನಾ ಸ್ಥಳಕ್ಕೆ ಪ.ಪಂ ಮುಖ್ಯಾಧಿಕಾರಿ ಚಂದ್ರಶೇಖರ ಬಿ., ಅಧ್ಯಕ್ಷೆ ಜಯಸುಧಾ ಭೋವಿವಡ್ಡರ ಆಗಮಿಸಿದರು.

ಪಟ್ಟಣದ ಕೊಳಚೆ ಪ್ರದೇಶದಲ್ಲಿ ನೀಡಿರುವ ಹಕ್ಕು ಪತ್ರದಂತೆ ಹಂತ ಹಂತವಾಗಿ ನಮೂನೆ 3 ನೀಡಲು ಕ್ರಮವಹಿಸಲಾಗುವುದು. ಗಾಂಧಿನಗರದ ಘೋಷಿತ ಕೊಳಚೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ಆದೇಶದಲ್ಲಿ ಸೂಚಿರುವ 530 ಫಲಾನುಭವಿಗಳ ಯಾದಿಯಂತೆ ಮತ್ತು ಕಂಬಾರಗಟ್ಟಿ ಹಕ್ಕು ಪತ್ರದಾರರಿಗೆ ಏಪ್ರಿಲ್ 30ರ ಒಳಗೆ ನಮೂನೆ 3 ನೀಡಲಾಗುವುದು ಎಂದು ಲಿಖಿತವಾಗಿ ಮುಖ್ಯಾಧಿಕಾರಿ, ಅಧ್ಯಕ್ಷೆ ಉಪಾಧ್ಯಕ್ಷ ಸಹಿ ಮಾಡಿದ ಪ್ರತಿಯನ್ನು ನೀಡಿದ ಮೇಲೆ ಪ್ರತಿಭಟನಾಕಾರರು ಪ್ರತಿಭಟನೆ ಹಿಂದಕ್ಕೆ ಪಡೆದರು.

ಈ ವೇಳೆ ರವಿ ಹಾವೇರಿ, ಪ.ಪಂ. ಸದಸ್ಯ ಅಶೋಕ ಚಲವಾದಿ, ವಿಶ್ವನಾಥ ಪವಾಡಶೆಟ್ಟರ, ರೇಣುಕಾ ಹಾವೇರಿ, ಚಿದಾನಂದ ಹರಿಜನ, ರವಿ ಬಾಳಂಬೀಡ, ರಾಜು, ರಾಮು ಕೊರವರ ಸೇರಿದಂತೆ ಮುಂತಾದವರಿದ್ದರು.