ಜಿಲ್ಲೆ

ನಿವೇಶನ ನೀಡಲು ಆಗ್ರಹಿಸಿ ಪ್ರತಿಭಟನೆ

ಸೋಮನಾಥ ರೆಡ್ಡಿ

ಮುಂಡರಗಿ: ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಬಿದರಹಳ್ಳಿ ಪುನರ್ವಸತಿ ಗ್ರಾಮದಲ್ಲಿ ನಿವೇಶನ ಕೊಡಬೇಕು ಎಂದು ಒತ್ತಾಯಿಸಿ ಬಿದರಹಳ್ಳಿ ಗ್ರಾಮದ ಗಣೇಶ ಬಸೇಗೌಡ್ರ ಕುಟುಂಬಸ್ಥರು ತಹಸೀಲ್ದಾರ್ ಕಾರ್ಯಾಲಯದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಸಿಂಗಟಾಲೂರು ಏತ ನೀರಾವರಿ ಯೋಜನೆ ಬ್ಯಾರೇಜ್ ಹಿನ್ನೀರಿಗೆ ಬಿದರಹಳ್ಳಿ ಗ್ರಾಮವು ಮುಳುಗಡೆಯಾಗಲಿದ್ದು, ಈಗಾಗಲೇ ಪುನರ್ವಸತಿ ಗ್ರಾಮದಲ್ಲಿ ಹಕ್ಕುಪತ್ರ ವಿತರಿಸಲಾಗಿದೆ. ನನ್ನ ಕುಟುಂಬಕ್ಕೆ ಪ್ಲಾಟ್ ನಂ.87 ಅನ್ನು ಸರ್ಕಾರದಿಂದ ನೀಡಿದ್ದರೂ ಇದುವರೆಗೂ ನಿವೇಶನ ದೊರಕಿಸಿಕೊಟ್ಟಿಲ್ಲ. ಸ್ಥಳೀಯ ಕೆಲ ನಾಗರಿಕರ ಒತ್ತಡದಿಂದ 8 ವರ್ಷವಾದರೂ ನಿವೇಶನ ಕೊಡದೆ ಸತಾಯಿಸಲಾಗುತ್ತಿದೆ ಎಂದು ದೂರಿದರು.\

ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡರ, ಪುನರ್ವಸತಿ ವಿಭಾಗದ ಎಇ ಸೋಮಶೇಖರ, ವೈ.ಎನ್. ಗೌಡರ, ಹೇಮಂತಗೌಡ ಪಾಟೀಲ, ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ಇತರರು ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು. ‘ಗ್ರಾಮಕ್ಕೆ ಭೇಟಿ ನೀಡಿ 15 ದಿನದೊಳಗೆ ನಿವೇಶನ ಗುರುತಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಹಸೀಲ್ದಾರ್ ಭರವಸೆ ನೀಡಿದರು.

ವಿನೋದಾ ಬಸೇಗೌಡ್ರ, ಶಶಿಕಲಾ ಬಸೇಗೌಡ್ರ, ಮಂಗಳಾ ಬಸೇಗೌಡ್ರ, ರೇಣುಕಾ ಬಸೇಗೌಡ್ರ, ಕೋಟೆಪ್ಪ ಬಸೇಗೌಡ್ರ, ಎಚ್.ಡಿ. ಕಿಲಾರಿ ಇತರರು ಇದ್ದರು.