ಜಿಲ್ಲೆ

ಸತ್ಯಾಸತ್ಯತೆ ಹೊರತೆಗೆಯಲು ಆಗ್ರಹಿಸಿ ಪ್ರತಿಭಟನೆ

ಅವಿನಾಶ್ ಜೈನಹಳ್ಳಿ

ಮೈಸೂರು: ಸಂಸತ್ ಭವನದಲ್ಲಿ ಬುಧವಾರ ಏಕಾಏಕಿ ವೀಕ್ಷಕರ ಗ್ಯಾಲರಿಯಿಂದ ಸದನಕ್ಕೆ ಜಿಗಿದು ಕೋಲಾಹಲ ಎಬ್ಬಿಸಿ ಆತಂಕ ಸೃಷ್ಟಿಸಿದ ವ್ಯಕ್ತಿಗಳ ಪೈಕಿ ಡಿ.ಮನೋರಂಜನ್ ಹಾಗೂ ಸಾಗರ್ ಶರ್ಮಾ ಅವರನ್ನು ಎಲ್ಲ ರೀತಿ ವಿಚಾರಿಸಿ ಸತ್ಯಾಸತ್ಯತೆಯನ್ನು ಹೊರತಗೆಯುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪುರಭವನದ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಶನಿವಾರ ಪ್ರತಿಭಟನೆ ನಡೆಯಿತು.

ಮುಂದಿನ ಲೋಕಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ಈ ರೀತಿಯ ಉಗ್ರರ ದಾಳಿ, ಸರ್ಜಿಕಲ್ ದಾಳಿ ಎಂಬ ಭಾವನಾತ್ಮಕ ವಿಚಾರಗಳ ಮೂಲಕ ದೇಶದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಿ ಚುನಾವಣೆ ನಡೆಸಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ಸಂಸತ್ತಿನೊಳಗೆ ಪ್ರವೇಶ ಮಾಡಲು ಪಾಸ್‌ಗಳನ್ನು ನೀಡಿದ್ದ ಸಂಸದ ಪ್ರತಾಪ್ ಸಿಂಹ ಅವರನ್ನು ವಿಚಾರಣೆಗೊಳಪಡಿಸಬೇಕು. ಈ ಘಟನೆಯನ್ನು ಸೂಕ್ಷ್ಮವಾಗಿ ಪರಿಗಣಿಸಿ, ದೇಶದ ನಾಗರಿಕ ಜೀವ ಮತ್ತು ಭಾವನೆಗಳೊಂದಿಗೆ ಆಟವಾಡುತ್ತಿರುವವರ ವಿರುದ್ಧ ದೇಶದ್ರೋಹದಂತಹ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ದಸಂಸ ಸಂಚಾಲಕ ಚೋರನಹಳ್ಳಿ ಶಿವಣ್ಣ, ಮುಖಂಡರಾದ ಕೆ.ವಿ.ದೇವೇಂದ್ರ, ಹಾರೋಹಳ್ಳಿ ನಟರಾಜ್, ಶಿವಮೂರ್ತಿ ಶಂಕರಪುರ ಇತರರಿದ್ದರು.