ಇಳಕಲ್ಲ(ಗ್ರಾ): ತೊಗರಿ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಮಂಗಳವಾರ ಎಪಿಎಂಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಗುರು ಗಾಣಿಗೇರ ಮಾತನಾಡಿ, ತೊಗರಿ ಬೆಳೆ ಕಟಾವು ಮಾಡಿ ರೈತರು ರಾಶಿ ಮಾಡುತ್ತಿದ್ದಾರೆ. 15 ದಿನದ ಹಿಂದೆ ಪ್ರತಿ ಕ್ವಿಂಟಾಲ್‌ಗೆ 12 ಸಾವಿರ ರೂ. ಬೆಲೆಯಿತ್ತು. ಇಂದು 6 ಸಾವಿರ ರೂ.ಗೆ ಬೆಲೆ ಕುಸಿತಗೊಂಡಿದೆ. ಈಗಾಗಲೇ ರೈತರು ಬೀಜ, ಗೊಬ್ಬರಕ್ಕಾಗಿ ಪ್ರತಿ ಎಕರೆಗೆ 25 ಸಾವಿರದಿಂದ 40 ಸಾವಿರ ರೂ. ವೆಚ್ಚ ಮಾಡಿದ್ದಾರೆ. ಆದರೆ, ಬೆಲೆ ಕುಸಿತದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಸರ್ಕಾರ ತೊಗರಿ ಖರೀದಿ ಕೇಂದ್ರ ಸ್ಥಾಪಿಸಿ, ಪ್ರತಿ ಕ್ವಿಂಟಾಲ್‌ಗೆ 8 ರಿಂದ 9 ಸಾವಿರ ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಜೀರಸಾಬ ಮೂಳಮನಿ ಮಾತನಾಡಿ, ಎಪಿಎಂಸಿ ಮಾರುಕಟ್ಟೆಯಲ್ಲಿ ತೂಕದಲ್ಲಿ ಮೋಸ ಮಾಡುವುದನ್ನು ತಡೆಗಟ್ಟಿ, ಸರಿಯಾದ ಬೆಲೆಯಲ್ಲಿ ಖರೀದಿಸಬೇಕು. ಕೃಷಿ ಇಲಾಖೆ ಅಧಿಕಾರಿಗಳು ಎಪಿಎಂಸಿ ವರ್ತಕರ ಮೇಲೆ ಕ್ರಮ ಕೈಗೊಳದ್ದಿದ್ದರೆ, ಕೃಷಿ ಇಲಾಖೆಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಆಗಮಿಸಿ ರೈತ ಸಂಘದ ಮನವಿ ಸ್ವೀಕರಿಸಿ ಮಾತನಾಡಿ, ಶೀಘ್ರ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಬಂಡರಗಲ್ಲ, ಬಸನಗೌಡ ಪೈಲ್, ರಸೂಲಸಾಬ ತಹಸೀಲ್ದಾರ್, ಬಸನಗೌಡ ಪಾಟೀಲ, ರಾಜಮಹಮ್ಮದ ನದ್ಾ, ರಾಜಶೇಖರ ಹುಡೇದಮನಿ, ಮಹಾಲಿಂಗಪ್ಪ ಕೂಡ್ಲೂರ, ಸಿದ್ದು ಘಂಟಿ, ದೊಡ್ಡಪ್ಪ ಕವಡಿಮಟ್ಟಿ, ಪ್ರದೀಪ ಅಮರಣ್ಣನವರ, ತಾಲೂಕು ಕೃಷಿ ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಅಟರದಾನಿ, ತಹಸೀಲ್ದಾರ್ ಸತೀಶ ಕೂಲಡಗಿ ಮತ್ತಿತರರಿದ್ದರು.