ಹಾನಗಲ್ಲ: ಹೊಲದಲ್ಲಿ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣರಾದ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಜಿಲ್ಲಾ ಚಲವಾದಿ ಮಹಾಸಭಾ, ವಿವಿಧ ದಲಿತ ಸಂಘಟನೆಗಳ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಗೃಹ ಸಚಿವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ತಾಲೂಕಿನ ಇನಾಂ ನೀರಲಗಿ ಗ್ರಾಮದಲ್ಲಿ ಗಣೇಶ ಹಬ್ಬದಂದು ಬಾಳೆಗಿಡಗಳನ್ನು ತರಲು ತೋಟಕ್ಕೆ ಹೋದಾಗ ಬೇಲಿಗೆ ಅಳವಡಿಸಿದ್ದ ತಂತಿಯಿಂದ ವಿದ್ಯುತ್ ತಗುಲಿ ಅಣ್ಣಪ್ಪ ಪಡವೇಶಪ್ಪ ಕ್ಯಾಸನೂರ ಮೃತಪಟ್ಟಿದ್ದ. ಈ ಕುರಿತು ಆತನ ಸಂಬಂಧಿಕರು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 15 ದಿನಗಳಾದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಚಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ ಮಡ್ಲೇರ ಮಾತನಾಡಿ, ದಲಿತರ ಮೇಲೆ ಆದ ತೊಂದರೆಗಳಿಗೆ ಇಲಾಖೆಗಳು ಹಾಗೂ ಸರ್ಕಾರ ಸ್ಪಂದಿಸಬೇಕು. ಅವೈಜ್ಞಾನಿಕವಾಗಿ ವಿದ್ಯುತ್ ತಂತಿ ಅಳವಡಿಸಿ ವ್ಯಕ್ತಿಯ ಸಾವಿಗೆ ಕಾರಣರಾದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸ್, ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ಖಂಡಿಸುತ್ತೇವೆ. ಶೀಘ್ರ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದರು.
ವಿದ್ಯುತ್ ತಗುಲಿ ಅಣ್ಣಪ್ಪ ಕ್ಯಾಸನೂರ ಸಾವನ್ನಪ್ಪಿ 15 ದಿನಗಳು ಕಳೆದರೂ ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಆರೋಪಿಗಳು ರಾಜಿ ಮಾಡಿಕೊಳ್ಳಲು ಒತ್ತಡ ಹೇರುವ ಜತೆಗೆ ದೂರು ಹಿಂಪಡೆಯುವಂತೆ ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸ್ ಇಲಾಖೆ ಕೂಡಲೇ ಆರೋಪಿಗಳನ್ನು ಬಂಧಿಸದಿದ್ದರೆ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಹಾನಗಲ್ಲ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಅಧಿಕಾರಿಗಳನ್ನು ಕರೆಸಲು ಪಟ್ಟು: ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬದ ಜತೆಗೆ ಆರೋಪಿ ಹೊಲದ ವಿದ್ಯುತ್ ಸಂಪರ್ಕ ಕಡಿತಗೊಳಿಸಿಲ್ಲ. ಪದೇಪದೆ ಮನವಿ ಸಲ್ಲಿಸುವುದೇ ಕೆಲಸವಲ್ಲ ಎಂದು ಪೊಲೀಸ್ ಹಾಗೂ ಹೆಸ್ಕಾಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಅಧಿಕಾರಿಗಳನ್ನು ಪ್ರತಿಭಟನಾ ಸ್ಥಳಕ್ಕೆ ಕರೆಸಿ ಮಾಹಿತಿ ಪಡೆಯಲಾಯಿತು. ನಂತರ ಪ್ರತಿಭಟನಾಕಾರರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ನ್ಯಾಯ ಒದಗಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆದು, ಶಿರಸ್ತೆದಾರ ಟಿ.ಕೆ. ಕಾಂಬಳೆ ಅವರಿಗೆ ಮನವಿ ಸಲ್ಲಿಸಿದರು.
ದಲಿತ ಮುಖಂಡ ರಾಮು ಯಳ್ಳೂರ, ಬಿ. ಮಂಜುನಾಥ, ಹನಮಂತಪ್ಪ ಕೋಣನಕೊಪ್ಪ, ಮಂಜುನಾಥ ಕರ್ಜಗಿ, ಮಹೇಶ ಕ್ಯಾಸನೂರ, ನಿಂಗಪ್ಪ ಕಾಳೇರ, ಜೆಡಿಎಸ್ ತಾಲೂಕಾಧ್ಯಕ್ಷ ಆರ್.ಬಿ. ಪಾಟೀಲ ಇತರರಿದ್ದರು
ನಾವು ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇವೆ. ಇದರಲ್ಲಿ ರಾಜಿ ಪ್ರಶ್ನೆಯೇಯಿಲ್ಲ. ಈ ಕುರಿತು ನಮ್ಮ ಇಲಾಖೆ ಮೂಲಕ ಆರೋಪಿಗಳ ಪತ್ತೆಗೆ ಮುಂದಾಗಿದ್ದೇವೆ. ಕೂಡಲೆ ಆರೋಪಿಗಳನ್ನು ಬಂಧಿಸಲಾಗುವುದು. | ಸಂಪತ್ಕುಮಾರ ಆನಿಕಿವಿ, ಪಿಎಸ್ಐ ಹಾನಗಲ್ಲ