ರಾಯಚೂರು ಖಾಲಿ ಇರುವ ಎಲ್ಲಾ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಅಲ್ಲಿಯವರೆಗೆ ಅತಿಥಿ ಶಿಕ್ಷಕರನ್ನು ನೇಮಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಿ ಶಾಲೆ ಅಭಿವೃದ್ಧಿ ವೇದಿಕೆಯಿಂದ ನಗರದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಹಿಂದಿನ ಹಾಗೂ ಪ್ರಸ್ತುತ ಸರ್ಕಾರ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಕನಿಷ್ಟ ಗಮನ ಹರಿಸುತ್ತಿಲ್ಲ. ಸರ್ಕಾರವು ಖಾಸಗೀಕರಣವನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸುತ್ತಿದ್ದು, ಇದರಿಂದ ದೇಶ ಹಾಗೂ ರಾಜ್ಯದಲ್ಲಿ ಶೇ.80 ಕ್ಕಿಂತ ಹೆಚ್ಚಿನ ಬಡವರಿಗೆ ಅನ್ಯಾಯವಾಗುತ್ತಿದೆ ಎಂದು ಸರ್ಕಾರದ ವಿರುದ್ಧ ದೂರಿದರು. ಖಾಲಿ ಇರುವ ಎಲ್ಲಾ ಶಿಕ್ಷಕರ
ಹುದ್ದೆಗಳನ್ನು ಭರ್ತಿ ಮಾಡಬೇಕು. ಭರ್ತಿಯಾಗುವವರೆಗೂ ಅತಿಥಿ ಶಿಕ್ಷಕರನ್ನು ಶಾಲೆಗಳಿಗೆ ನೇಮಿಸಿಕೊಳ್ಳಬೇಕು.
ಸರ್ಕಾರ ವಿಷಯವಾರು, ತರಗತಿವಾರು ಶಿಕ್ಷಕರನ್ನು ನೇಮಿಸಬೇಕು. ತಕ್ಷಣ ಕನಿಷ್ಟ 100ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲೇಬೇಕು ಎಂದು ಆಗ್ರಹಿಸಿದರು. ಪ್ರಸ್ತುತ ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ತುಂಬಾ ಕೆಟ್ಟದ್ದಾಗಿದ್ದು, ಸರ್ಕಾರ ತಕ್ಷಣ ಒಂದು ಕ್ರಿಯಾ ಯೋಜನೆಯನ್ನು ರೂಪಿಸಿ, ಮುಂದಿನ 3 ತಿಂಗಳುಗಳ ಒಳಗಾಗಿ, ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಕೊಠಡಿ, ಬೆಂಚು, ವಿದ್ಯುತ್, ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
ಪ್ರತಿ ಶಾಲೆಗೆ ಒಬ್ಬರು ಪರಿಚಾರಕರನ್ನು ಕಡ್ಡಾಯವಾಗಿ ನೇಮಿಸಬೇಕು. ಒಂದು ವೇಳೆ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ವಿದ್ಯಾಪಾಟೀಲ್, ಸೈಯದ್ ಹಫೀಜುಲ್ಲಾ, ಭೀಮಮ್ಮ, ಮರಿಯಮ್ಮ, ವೀಣಾ, ಸೀತಾ, ಶ್ರೀದೇವಿ, ಸುನಿತಾ, ಭಾಗ್ಯಲಕ್ಷ್ಮೀ, ಬಸವರಾಜ.ಜಿ,ರುಪಾ, ಮಾರೆಮ್ಮ, ಬಸ್ಸಮ್ಮ, ಹನುಮೇಶ, ಮಹಲಿಂಗರಾಯ ಸೇರಿದಂತೆ ಅನೇಕರು ಇದ್ದರು.