ಮಡಿಕೇರಿ: ರಾಜ್ಯಗಳ ಮರು-ಸಂಘಟನಾ ಕಾಯ್ದೆ ೧೯೫೬ರ ಒಪ್ಪಂದಗಳಿಗೆ ಕರ್ನಾಟಕ ರಾಜ್ಯ ಬದ್ಧವಾಗಿಲ್ಲ. ಇದರಿಂದ ಕೊಡವರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕನ್ನಡ ರಾಜ್ಯೋತ್ಸವದ ದಿನದಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತು.
ಈ ಸಂದರ್ಭ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಜಿಲ್ಲಾಡಳಿತದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ೯ ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ಅವರು, ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿರವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ಸಲ್ಲಿಸಿ ಕೊಡವ ಲ್ಯಾಂಡ್ ಪರವಾಗಿ ಆಯೋಗವನ್ನು ರಚಿಸಬೇಕೆಂದು ಪ್ರತಿಪಾದಿಸಿದ್ದಾರೆ. ಸರ್ಕಾರಗಳು ಈ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗವಾಗಿರುವ ಕೊಡವರಿಗೆ ಸಾಂವಿಧಾನಿಕ ಭದ್ರತೆ ನೀಡಬೇಕೆಂದು ಆಗ್ರಹಿಸಿದರು.
ಸಂವಿಧಾನದ ೭ನೇ ತಿದ್ದುಪಡಿಯಲ್ಲಿ ಪ್ರತಿಪಾದಿಸಲಾದ ರಾಜ್ಯಗಳ ಮರು-ಸಂಘಟನಾ ಕಾಯ್ದೆ ೧೯೫೬ರ ಒಪ್ಪಂದಗಳಿಗೆ ಕರ್ನಾಟಕ ರಾಜ್ಯವು ಬದ್ಧವಾಗಿಲ್ಲ. ಸಿ ರಾಜ್ಯವಾಗಿದ್ದ ಕೂರ್ಗ್ ೧೯೫೬ರಲ್ಲಿ ಕರ್ನಾಟಕದೊಂದಿಗೆ ವಿಲೀನವಾದ ನಂತರ ಕೊಡವರನ್ನು ರಾಜ್ಯದ ೨ನೇ ದರ್ಜೆಯ ವರ್ಣಭೇದ ನೀತಿಯ ನಾಗರಿಕರಂತೆ ಪರಿಗಣಿಸಲಾಗಿದೆ. ಇದು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನಾಚಪ್ಪ ಆರೋಪಿಸಿದರು.
ಕೊಡವರು ಕೊಡವ ಪ್ರದೇಶದ ಮೂಲನಿವಾಸಿ ಬುಡಕಟ್ಟು ಜನಾಂಗವಾಗಿದೆ. ಈ ಸೂಕ್ಷ್ಮ ಜನರ ರಕ್ಷಣೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಆದ್ದರಿಂದ ಆಂತರಿಕ ರಾಜಕೀಯ-ಸ್ವಯಂ-ನಿರ್ಣಯದ ಹಕ್ಕು, ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ ಸೇರಿದಂತೆ ಕೊಡವರ ಪರವಾದ ೯ ನ್ಯಾಯ ಸಮ್ಮತವಾದ ಬೇಡಿಕೆಗಳನ್ನು ಮಂಡಿಸುತ್ತಿರುವುದಾಗಿ ತಿಳಿಸಿದರು.
ಮೂಲನಿವಾಸಿ ಕೊಡವ ಜನಾಂಗವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು. ಉಚ್ಚ ನ್ಯಾಯಾಲಯದ ಆದೇಶದಂತೆ, ಕೊಡವ ಜನಾಂಗದ ಸಮಗ್ರ ಜನಾಂಗೀಯ ಅಧ್ಯಯನವನ್ನು ಆರಂಭಿಸಬೇಕು. ಲಲಿತ ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಜೀವಂತಗೊಳಿಸಲು, ವಿಶ್ವ ಕೊಡವಾಲಜಿ ಸಂಶೋಧನಾ ಕೇಂದ್ರ ಮತ್ತು ಕೊಡವ ಸುಧಾರಿತ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಸರ್ಕಾರವು ನಮಗೆ ಭೂಮಿಯನ್ನು ನೀಡಬೇಕು. ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತತ್ತೆ ಬೇಡಿಕೆಯನ್ವಯ ೨ನೇ ರಾಜ್ಯ ಮರು ಸಂಘಟನೆ ಆಯೋಗ ರಚಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ನಿರತರು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿತು. ಈ ಸಂದರ್ಭದಲ್ಲಿ ಕಲಿಯಂಡ ಪ್ರಕಾಶ್, ಕಲಿಯಂಡ ಮೀನಾ ಪ್ರಕಾಶ್, ಬೊಟ್ಟಂಗಡ ಸವಿತ ಗಿರೀಶ್, ಲೆ.ಕ.ಬಿ.ಎಂ.ಪಾರ್ವತಿ, ಪಟ್ಟಮಾಡ ಲಲಿತ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಕೂಪದಿರ ಪುಷ್ಪ ಮುತ್ತಣ್ಣ, ಚಂಬಂಡ ಜನತ್, ಅರೆಯಡ ಗಿರೀಶ್, ಕಾಂಡೆರ ಸುರೇಶ್, ಬೇಪಡಿಯಂಡ ದಿನು, ಬೊಟ್ಟಂಗಡ ಗಿರೀಶ್ ಮತ್ತಿತರರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಕೊಡವ ಲ್ಯಾಂಡ್‌ಗಾಗಿ ಒತ್ತಾಯಿಸಿದರು.