ಜಿಲ್ಲೆ

ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

Dharwad

ಧಾರವಾಡ: ಇಲ್ಲಿನ ಗಾಂಧಿನಗರ ಮುಖ್ಯ ರಸ್ತೆ ದುರಸ್ತಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗಾಂಧಿನಗರ ಯುವಜನ ಸಂಘ ಹಾಗೂ ನಿವಾಸಿಗಳು ಸೋಮವಾರ ರಸ್ತೆ ಸಂಚಾರ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

ಹು-ಧಾ ಅವಳಿನಗರ ವೇಗವಾಗಿ ಬೆಳೆಯುತ್ತಿದ್ದರೂ ರಸ್ತೆಗಳ ಸ್ವರೂಪ ಮಾತ್ರ ಇನ್ನೂ ಬದಲಾಗಿಲ್ಲ. ಗಾಂಧಿನಗರ ಮುಖ್ಯ ರಸ್ತೆಯಿಂದ ತೇಜಸ್ವಿನಗರ ಬ್ರಿಜ್​ವರೆಗಿನ ರಸ್ತೆ ದುರಸ್ತಿಗೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆ ನಡೆಸಿ ಪಾಲಿಕೆ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ರಸ್ತೆ ದುರಸ್ತಿ ಕಾರ್ಯ ಆಗಿಲ್ಲ ಎಂದು ದೂರಿದರು.

ಮೊದಲೇ ಅಲ್ಪಸ್ವಲ್ಪ ಹಾಳಾಗಿದ್ದ ರಸ್ತೆ ಮಳೆಯಿಂದ ಸಂಪೂರ್ಣ ಹಾಳಾಗಿದೆ. ವಾಹನ ಸವಾರರು ಜೀವ ಭಯದಿಂದಲೇ ಪ್ರಯಾಣ ಮಾಡುವಂತಾಗಿದೆ. ಇನ್ನು ಸಾಕಷ್ಟು ಧೂಳು ತುಂಬಿದ್ದರಿಂದ ಜನರಿಗೆ ರೋಗದ ಭಯವೂ ಕಾಡುತ್ತಿದೆ. ಇನ್ನಾದರೂ ಪಾಲಿಕೆ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಇದಲ್ಲದೆ ಗಾಂಧಿನಗರ 1ನೇ ಕ್ರಾಸ್​ನಲ್ಲಿ ಮಲೆನಾಡು ಅಭಿವೃದ್ಧಿ ಯೋಜನೆ ಅಡಿ 10 ವರ್ಷದ ಹಿಂದೆ ನಿರ್ವಿುಸಿರುವ ಸಮುದಾಯ ಭವನ ಬಳಕೆ ಇಲ್ಲದೆ ಶಿಥಿಲಾವಸ್ಥೆಗೆ ತಲುಪಿದೆ. ಈ ಕಟ್ಟಡವನ್ನು ಪಾಲಿಕೆ ವಶಕ್ಕೆ ಪಡೆದು ಹು-ಧಾ ಒನ್ ಶಾಖೆ ಪ್ರಾರಂಭಿಸಿ, ವಿದ್ಯುತ್, ನೀರಿನ ಕರ, ಆಸ್ತಿ ತೆರಿಗೆ ಸೇರಿ ಇತರ ನಾಗರಿಕ ಸೌಲಭ್ಯ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಕೆಲ ಹೊತ್ತು ಹು-ಧಾ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ ನಿವಾಸಿಗಳು, ನಂತರದಲ್ಲಿ ಗಾಂಧಿನಗರ ಮುಖ್ಯ ರಸ್ತೆ ಬಂದ್ ಮಾಡಿ ಸುಮಾರು ಹೊತ್ತು ಪ್ರತಿಭಟನೆ ನಡೆಸಿದರು. ಬಳಿಕ ಸಂಬಂಧಿಸಿದ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಸ್ತೆ ದುರಸ್ತಿ ಮಾಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಅರವಿಂದ ಹುಣಸಿಮರದ, ಮನೋಜ ಕರ್ಜಗಿ, ಸಂತೋಷ ಪಟ್ಟಣಶೆಟ್ಟಿ, ನಾಗರಾಜ ಮಲ್ಲಾಡದ, ಮಂಜುನಾಥ ಭೋವಿ, ಆನಂದ ಜಾಧವ, ರಾಜು ಸೂರ್ಯವಂಶಿ, ಲತಾ ಕುಸುಗಲ್ಲ, ರೇಖಾ ನಾಡಗೌಡ, ನಾಗರಿಕರು, ಇತರರು ಇದ್ದರು.

----------------------

23ಎಎನ್​ಜಿ2

ಫೋಟೋ-23ಎಎನ್​ಜಿ2:

ಅಣ್ಣಿಗೇರಿ ಪಟ್ಟಣದ ಬೆಂತೂರ ರಸ್ತೆಯಲ್ಲಿನ ಆಶ್ರಯ ಕಾಲನಿ ಸಮಸ್ಯೆಗಳನ್ನು ಆಶ್ರಯ ಸಮಿತಿ ಸದಸ್ಯ ಶಿವಯೋಗಿ ಸುರಕೋಡ ಅವರು ಜಿಲ್ಲಾಧಿಕಾರಿಗೆ ವಿವರಿಸಿದರು. ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಅಣ್ಣಿಗೇರಿ ತಹಸೀಲ್ದಾರ್ ಕೊಟ್ರೇಶ ಗಾಳಿ, ನವಲಗುಂದ ತಹಸೀಲ್ದಾರ್ ನವೀನ ಹುಲ್ಲೂರ ಇದ್ದರು.

ಆಶ್ರಯ ಪ್ಲಾಟ್​ಗಳ ಹಂಚಿಕೆಯಲ್ಲಿ ತಾರತಮ್ಯ

*ಅಣ್ಣಿಗೇರಿ ಪುರಸಭೆ ಆಶ್ರಯ ಸಮಿತಿ ಸದಸ್ಯ ಶಿವಯೋಗಿ ಸುರಕೋಡ ಆರೋಪ

ಅಣ್ಣಿಗೇರಿ: ಹಿಂದಿನ ಅವಧಿಯಲ್ಲಿ ಆಶ್ರಯ ಯೋಜನೆಯ ಪ್ಲಾಟ್​ಗಳ ಹಂಚಿಕೆಯಲ್ಲಿ ತಮಗೆ ಬೇಕಾದವರನ್ನು ಆಯ್ಕೆಗೊಳಿಸಿ ತಾರತಮ್ಯ ಮಾಡಲಾಗಿದೆ. ಮನೆ, ಹೊಲ ಮತ್ತು ಸರ್ಕಾರದ ಆಶ್ರಯ ಯೋಜನೆಯಲ್ಲಿ ಪ್ಲಾಟ್ ಪಡೆದುಕೊಂಡವರಿಗೇ ಮತ್ತೆ ನೀಡಲಾಗಿದೆ ಎಂದು ಅಣ್ಣಿಗೇರಿ ಪುರಸಭೆ ಆಶ್ರಯ ಸಮಿತಿ ಸದಸ್ಯ ಶಿವಯೋಗಿ ಸುರಕೋಡ ಆರೋಪಿಸಿದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪಟ್ಟಣದ ಬೆಂತೂರ ರಸ್ತೆಯ ಆಶ್ರಯ ಕಾಲನಿ ಪರಿಶೀಲಿಸಿದಾಗ ಅವರು ಈ ವಿಷಯ ಪ್ರಸ್ತಾಪಿಸಿದರು.

18.20 ಎಕರೆ ಭೂಮಿಯಲ್ಲಿ ನಿರ್ವಿುಸಿದ ಆಶ್ರಯ ಕಾಲನಿಯಲ್ಲಿ 670 ಪ್ಲಾಟ್​ಗಳಿವೆ. ಈಗ 330 ಫಲಾನುಭವಿಗಳನ್ನು ಆಯ್ಕೆಗೊಳಿಸಿದ್ದು, ಅವರ ಹೆಸರಲ್ಲಿ ಪಟ್ಟಾ ಬುಕ್ ಸಹ ಬಂದಿವೆ. ಇದರಲ್ಲಿ 104 ಜನರ ಹೆಸರು ಈಗಾಗಲೇ ಪಟ್ಟಣದ ಬಂಗಾರಪ್ಪ ಬಡಾವಣೆ, ಅಮೃತೇಶ್ವರ ನಗರ, ಅಂಬಿಕಾ ನಗರದಲ್ಲಿ ಪ್ಲಾಟ್ ಪಡೆದವರಾಗಿದ್ದಾರೆ. ಅವರ ಹೆಸರು ತೆಗೆದುಹಾಕಬೇಕು. ಆಸ್ತಿ-ಅಂತಸ್ತು ಇದ್ದವರಿಗೆ ಸರ್ಕಾರದ ಭೂಮಿ ಕೊಡುವುದು ಎಷ್ಟು ಸೂಕ್ತ? ಬಡವರಿಗೆ ಇಂತಹ ಸೌಲಭ್ಯಗಳು ಸಿಗಬೇಕು. ಅರ್ಹರಿಗೆ ನಿವೇಶನ ದೊರಕಿಸಬೇಕು ಎಂದು ಆಗ್ರಹಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಫಲಾನುಭವಿಗಳ ಆಯ್ಕೆ ಪಟ್ಟಿ ಪರಿಶೀಲಿಸಿ, ಬಡವರಿಗೆ ನಿವೇಶನ ದೊರಕಿಸುವಂತೆ ಪುರಸಭೆ ಮುಖ್ಯಾಧಿಕಾರಿ ಕೆ.ಎಫ್. ಕಟಗಿ ಅವರಿಗೆ ಸೂಚಿಸಿದರು.

ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಅಣ್ಣಿಗೇರಿ ತಹಸೀಲ್ದಾರ್ ಕೊಟ್ರೇಶ ಗಾಳಿ, ನವಲಗುಂದ ತಹಸೀಲ್ದಾರ್ ನವೀನ ಹುಲ್ಲೂರ, ಷಣ್ಮುಖ ಗುರಿಕಾರ, ರಿಶಿ ಸಾರಂಗಿ, ಶಿವಾನಂದ ಹೊಸಳ್ಳಿ, ಷಣ್ಮುಖ ತೋಟಾಕಾವು, ಶಿವು ಹಾಳದೋಟರ, ಮಂಜುನಾಥ ದಿಡ್ಡಿ, ಇತರರಿದ್ದರು.

------------------------

23ಎಎನ್​ಜಿ1:

ಫೋಟೋ-23ಎಎನ್​ಜಿ1:

ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಹತ್ತಿ ಖರೀದಿ ಪ್ರಕ್ರಿಯೆಗೆ ಅಣ್ಣಿಗೇರಿ ಎಪಿಎಂಸಿ ಪ್ರಾಂಗಣದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೋಮವಾರ ಚಾಲನೆ ನೀಡಿದರು. ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಭೋಣಪ್ಪ ತಳವಾರ, ಮಹಾಬಳೇಶ್ವರ ಹೆಬಸೂರ, ಸುಭಾಶಚಂದ್ರಗೌಡ ಪಾಟೀಲ, ಷಣ್ಮುಖ ಗುರಿಕಾರ, ಇತರರಿದ್ದರು.

ರೈತರು ಧೃತಿಗೆಡಬಾರದು

ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅಭಯ | ಹತ್ತಿ ಬೆಂಬಲ ಬೆಲೆಯ ಖರೀದಿ ಕೇಂದ್ರ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಅಣ್ಣಿಗೇರಿ

ರೈತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು. ಬೆಂಬಲ ಬೆಲೆಯ ಹತ್ತಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ಜಗತ್ತನ್ನು ಕರೊನಾ ಕಾಡಿದೆ. ಅದು ರೈತರಿಗೆ ತೊಂದರೆ ಮಾಡಿದೆಯೋ, ಬಿಟ್ಟಿದೆಯೋ ಬೇರೆ ಮಾತು. ಆದರೆ, ರೈತರು ತಮ್ಮ ಬೆಳೆಗಳನ್ನು ದಲ್ಲಾಳಿಗಳಿಗೆ ಹಾಕದೆ ನೇರವಾಗಿ ಸರ್ಕಾರಕ್ಕೆ ಕೊಡುತ್ತಿರುವುದು ಸಂತೋಷದ ವಿಷಯ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಭಾರತೀಯ ಹತ್ತಿ ನಿಗಮ (ಸಿಸಿಐ) ಆರಂಭಿಸಿದ ಬೆಂಬಲ ಬೆಲೆಯ ಹತ್ತಿ ಖರೀದಿ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ವರ್ಷ ಇಳುವರಿ ಕಡಿಮೆ ಬರಬಹುದು. ಈ ಬಾರಿ ಅಣ್ಣಿಗೇರಿ ಎಪಿಎಂಸಿಯಲ್ಲಿ ಸಿಸಿಐನಿಂದ ಹತ್ತಿ ಖರೀದಿಯಲ್ಲಿ ಅಂದಾಜು 2 ಕೋಟಿ ರೂ.ಗಳಷ್ಟು ವಹಿವಾಟು ಆಗಬಹುದು. ಎಪಿಎಂಸಿ ಪ್ರಾಂಗಣದಲ್ಲಿ ರೈತರು ಹತ್ತಿ ಮಾರಾಟಕ್ಕಾಗಿ ಕಾಯುವುದು, ಮಲಗುವುದು ಬೇಡ. ಸಿಸಿಐ (ಕಾಟನ್ ಕಾಪೋರೇಷನ್ ಆಫ್ ಇಂಡಿಯಾ) ಅಧಿಕಾರಿಗಳ ಜತೆ ಸಭೆ ನಡೆಸಿ, ನೋಂದಣಿ ಪ್ರಕ್ರಿಯೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುತ್ತೇನೆ. ಯಾವುದೇ ಕಾರಣಕ್ಕೂ ರೈತರು ತಾವು ತಂದ ಫಸಲನ್ನು ಕಡಿಮೆ ಬೆಲೆಗೆ ಮಾರಿ ಮನನೊಂದು ಎಪಿಎಂಸಿ ಆವರಣದಿಂದ ಹೊರಗಡೆ ಹೋಗಬಾರದು ಎಂದು ಹೇಳಿದರು.

ಹತ್ತಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ನಿತೀಶ ಪಾಟೀಲ, ಖರೀದಿ ಕೇಂದ್ರದಿಂದ ರೈತರಿಗೆ ಬಹಳ ಉಪಯೋಗವಾಗಿದೆ. ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಒತ್ತಾಯದಿಂದ ಈ ಖರೀದಿ ಕೇಂದ್ರವನ್ನು ತ್ವರಿತವಾಗಿ ಆರಂಭಿಸಲಾಗಿದೆ. ಧಾರವಾಡ ಜಿಲ್ಲೆಗೆ ಮೊದಲ ಹಂತದಲ್ಲಿ 54 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ 48 ಕೋಟಿ ರೂ. ಬೆಳೆ ಪರಿಹಾರ ರೈತರ ಖಾತೆಗೆ ನೇರವಾಗಿ ಜಮೆಯಾಗುತ್ತದೆ. ಇನ್ನುಳಿದ 6 ಕೋಟಿ ರೂ. ಮಳೆಯಿಂದ ಮನೆ ಬಿದ್ದ ಕುಟುಂಬಗಳಿಗೆ ನೀಡಲಾಗುವುದು ಎಂದು ತಿಳಿಸಿದರು.

ನವಲಗುಂದ ತಹಸೀಲ್ದಾರ್ ನವೀನ ಹುಲ್ಲೂರ, ಅಣ್ಣಿಗೇರಿ ತಹಸೀಲ್ದಾರ್ ಕೊಟ್ರೇಶ ಗಾಳಿ, ಭೋಣಪ್ಪ ಫಕೀರಪ್ಪ ತಳವಾರ, ಷಣ್ಮುಖ ಗುರಿಕಾರ, ಈರಣ್ಣ ಗುರಿಕಾರ, ನಿಂಗಪ್ಪ ಬಡ್ಡೆಪ್ಪನವರ, ಚಂಬಣ್ಣ ಆಲೂರ, ಈಶಪ್ಪ ಹೊಂಬಳ, ಮಲ್ಲಿಕಾರ್ಜುನ ಹಕ್ಕರಿಕಿ, ಶಿವಯೋಗಿ ಸುರಕೋಡ, ಸಿಸಿಐ ಅಧಿಕಾರಿ ರವಿ ನಾಯಕ, ಅಣ್ಣಿಗೇರಿ ಪಿಎಸ್​ಐ ಎಲ್.ಕೆ. ಜೂಲಿಕಟ್ಟಿ, ಪೊಲೀಸ್ ಸಿಬ್ಬಂದಿ, ಎಪಿಎಂಸಿ ಸದಸ್ಯರು, ಅಣ್ಣಿಗೇರಿ ಹಾಗೂ ಸುತ್ತಲಿನ ಹಳ್ಳಿಗಳ ರೈತರು ಇದ್ದರು.

---------------------------

ಬಾಕ್ಸ್

ಸಾಂಕೇತಿಕವಾಗಿ 25 ರೈತರಿಂದ ಖರೀದಿ

ಅಣ್ಣಿಗೇರಿ ಎಪಿಎಂಸಿಯಲ್ಲಿ ಭಾರತೀಯ ಹತ್ತಿ ನಿಗಮದಿಂದ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿ ಕೇಂದ್ರ ಸೋಮವಾರ ಆರಂಭಗೊಂಡಿತು. ಮೊದಲ ದಿನವೇ ರೈತರು 25 ಟ್ರ್ಯಾಕ್ಟರ್​ಗಳಲ್ಲಿ ತಂದಿದ್ದ ಹತ್ತಿಯನ್ನು ಪ್ರತಿ ಕ್ವಿಂಟಾಲ್​ಗೆ 5725 ರೂ.ನಂತೆ ಸಾಂಕೇತಿಕವಾಗಿ ಖರೀದಿಸಲಾಯಿತು. ಇನ್ಮುಂದೆ ಹತ್ತಿ ಖರೀದಿ ಬಗ್ಗೆ ಎಪಿಎಂಸಿ ಆಡಳಿತ ಮಂಡಳಿಯೊಂದಿಗೆ ರ್ಚಚಿಸಿ ಇನ್ನೆರಡು ದಿನಗಳಲ್ಲಿ ಪ್ರಕಟಣೆ ಹೊರಡಿಸುತ್ತೇವೆ. ಆ ನಂತರ ರೈತರು ಹತ್ತಿ ತರಬೇಕು ಎಂದು ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಕೆ. ಸಜ್ಜನ ತಿಳಿಸಿದರು.

===============