ವಿಜಯವಾಣಿ ಸುದ್ದಿಜಾಲ ಧಾರವಾಡ
ನರೇಗಾ ಅಡಿ ಕೆಲಸ ಮಾಡಿದ ಕೂಲಿ ಕಾರ್ಮಿಕರ ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಜಿಲ್ಲಾ ಸಮಿತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಅಧ್ಯಕ್ಷೆ ದೀಪಾ ಧಾರವಾಡ ಮಾತನಾಡಿ, ನರೇಗಾ ಕೆಲಸ ಮಾಡಿದ 5ರಿಂದ 10 ದಿನಗಳಲ್ಲಿ ಕೂಲಿ ಹಣ ಪಾವತಿಯಾಗುತ್ತಿತ್ತು. ಆದರೆ, ಈಗ ಕೆಲಸ ಮಾಡಿ 2 ತಿಂಗಳು ಕಳೆದರೂ ಕೂಲಿ ಹಣ ದೊರೆಯದೆ ಕುಟುಂಬಗಳನ್ನು ಸಂಕಷ್ಟಕ್ಕೆ ನೂಕಿದಂತಾಗಿದೆ. ಆದ್ದರಿಂದ ಕೂಲಿ ಕಾರ್ಮಿಕರ ಹಿತದೃಷ್ಟಿಯಿಂದ ಕೂಡಲೇ ಬಾಕಿ ವೇತವನ ಬಿಡುಗಡೆಗೊಳಿಸಬೇಕು. ಪ್ರತಿ ಕುಟುಂಬಕ್ಕೆ 100 ದಿನ ಕೆಲಸ ನೀಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಅವರನ್ನು ಭೇಟಿ ಮಾಡಿದ ಪ್ರತಿಭಟನಾಕಾರರು ಕೂಲಿ ಕಾರ್ಮಿಕ ಸಮಸ್ಯೆಗಳ ವಿವರಿಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.
ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ, ಬಾಳೇಶ ಬೋಗೆನ್ನವರ, ರಾಣಪ್ಪ ಸಾವಂತನವರ, ಮಾರುತಿ ಪೂಜಾರ, ವಿಜಯಲಕ್ಷ್ಮೀ ನಿಕ್ಕಂ, ಹನುಮವ್ವ, ಗಂಗಾಧರ ಜಾಧವ್, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.