ವಿಜಯವಾಣಿ ಸುದ್ದಿಜಾಲ ಧಾರವಾಡ
ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಕಲಘಟಗಿ ರಸ್ತೆಯಿಂದ ಕನಾಟಕ ವಿಶ್ವವಿದ್ಯಾಲಯ ಸಂಪರ್ಕಿಸುವ ಮುಖ್ಯ ರಸ್ತೆಗೆ ಹೊಂದಿಕೊ0ಡಿರುವ ಜಾಧವ ಕಾಲನಿ ನಿವಾಸಿಗಳು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸುಮಾರು 25 ವರ್ಷಗಳಿಂದ ವಾಸವಾಗಿದ್ದರೂ ಪಕ್ಕಾ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ಈ ಕುರಿತು ಮಹಾನಗರ ಪಾಲಿಕೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ತಗ್ಗು ಪ್ರದೇಶವಾಗಿದ್ದು, ಚರಂಡಿ ನೀರು ಹರಿದು ಬಂದು ಮನೆಗಳ ಮುಂದೆ ನಿಲ್ಲುತ್ತದೆ. ರಸ್ತೆ ಗುಂಡಿಮಯವಾಗಿದ್ದು, ಕಸ ಸಂಗ್ರಹಣಾ ವಾಹನವೂ ಬಾರದಂತಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ಮಳೆ ಆರಂಭವಾಗಲಿದ್ದು, ಸಮಸ್ಯೆ ಮತ್ತಷ್ಟು ಜಟಿಲವಾಗಲಿದೆ. ಈ ಪ್ರದೇಶದಲ್ಲಿರುವ ರೇಣುಕಾ ಹಾಸ್ಟೆಲ್‌ನಿಂದ ಬರುವ ತ್ಯಾಜ್ಯ ನೀರು ರಸ್ತೆ ಹಾಗೂ ಮನೆಗಳೆದುರು ನಿಲ್ಲುತ್ತಿದೆ. ಕೆಲವೊಮ್ಮೆ ಚರಂಡಿ ನೀರು, ಸರಬರಾಜು ಆಗುವ ಕುಡಿಯುವ ನೀರಿಗೆ ಸೇರಿ ದುರ್ನಾತ ಬೀರುತ್ತದೆ. ಕೂಡಲೇ ಇತ್ತ ಗಮನ ಹರಿಸಿ ಸಂಬ0ಧಪಟ್ಟ ಇಲಾಖೆಯವರಿಗೆ ಕ್ರಮ ಕೈಗೊಳ್ಳಲು ಸೂಚಿಸಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಆನಂದ ಜಾಧವ, ವಿಶಾಲಾಕ್ಷಿ ಜಾಧವ, ರಾಕೇಶ ಭಜಂತ್ರಿ, ಛಾಯಪ್ಪ ಭಜಂತ್ರಿ, ಕರಣ ಸಾಳುಂಕೆ, ಕೃಷ್ಣ ಶಿಂಧೆ, ಬಸಂತಿ ಸಾಳುಂಕೆ, ಸುನಿತಾ ಮಾಳೆ, ಸಾಗರ ಮಾಳೆ, ಈರಪ್ಪ, ಜೈಲಾನಿ ರಾಮಾಪುರ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.