ಸ್ಮಶಾನಕ್ಕೆ ಭೂಮಿ ನೀಡಲು ಒತ್ತಾಯಿಸಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಅಣುಕು ಶವಪ್ರದರ್ಶನದ ಮೂಲಕ ಪ್ರತಿಭಟನೆ ನಡೆಸಲಾಯಿತು. 
ಜಿಲ್ಲೆ

ಸ್ಮಶಾನಕ್ಕೆ ಭೂಮಿ ನೀಡಲು ಒತ್ತಾಯಿಸಿ ಪ್ರತಿಭಟನೆ

ಎಂ.ರವಿ

ಸಿದ್ದಾಪುರ: ಹಿಂದು ಜನಾಂಗಕ್ಕೆ ಸ್ಮಶಾನ ಭೂಮಿ ನೀಡಲು ಒತ್ತಾಯಿಸಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಭಾರತ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷ ಸಿಪಿಐ(ಎಂ)ನೆಲ್ಯಹುದಿಕೇರಿ ಶಾಖೆ ವತಿಯಿಂದ ಸೋಮವಾರ ಕಲ್ಪಿತ ಶವಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.

ಸಿಪಿಐಎಂ ಕಾರ್ಯದರ್ಶಿ ಭರತ್ ಮಾತನಾಡಿ, ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಸಾವಿರಕ್ಕಿಂತಲೂ ಹೆಚ್ಚು ಜನಸಂಖ್ಯೆ ಇದ್ದು, ಸಾವು ಸಂಭವಿಸಿದಾಗ ಶವಸಂಸ್ಕಾರವನ್ನು ನಡೆಸಲು ಹಿಂದು ಸ್ಮಶಾನವೇ ಇಲ್ಲದೆ ಹಿಂದುಗಳು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಕಾವೇರಿ ನದಿ ದಡದಲ್ಲಿ ಇರುವ 48 ಸೆಂಟ್ ಜಾಗದಲ್ಲಿ ಶವಸಂಸ್ಕಾರ ಮಾಡಬೇಕಾಗಿದೆ. ಶವಸಂಸ್ಕಾರ ಮಾಡಿರುವ ಶವದ ಮೇಲೆ ಕಾಲಿಟ್ಟು ಶವಸಂಸ್ಕಾರ ಮಾಡಬೇಕಾಗಿರುವುದು ದುರದೃಷ್ಟಕರವಾಗಿದೆ. ಮತ್ತೊಂದು ಕಡೆ ಕಾವೇರಿ ನದಿ ಪ್ರವಾಹದಲ್ಲಿ ನದಿ ದಡ ಕುಸಿದು ಹೋಗುತ್ತಿರುವ ಸಮಯದಲ್ಲಿ ಶವದ ಅಸ್ತಿಗಳು ಕಾವೇರಿ ನದಿ ಪಾಲಾಗುತ್ತಿವೆ. ಇದರಿಂದ ಕಾವೇರಿ ನದಿಯೂ ಕಲುಷಿತಗೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ 183 ಸರ್ವೇ ನಂಬರ್‌ನಲ್ಲಿ ಹಿಂದು ಸ್ಮಶಾನ ಭೂಮಿ ಒತ್ತುವರಿಯಾಗಿದೆ. ಸ್ಮಶಾನ ಜಾಗವನ್ನು ಒತ್ತುವರಿ ಮಾಡಿದವರಿಂದ ಬಿಡಿಸಿ ಹಿಂದು ಜನಾಂಗದವರಿಗೆ ತಕ್ಷಣದಲ್ಲಿ ಭೂಮಿ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎಚ್.ಪಿ.ರಮೇಶ್, ಕಾಂಗ್ರೆಸ್ ಮುಖಂಡರಾದ ಶಶಿ, ಗ್ರಾಮಸ್ಥರಾದ ಕೆ.ಎಂ. ಸತ್ಯ, ರಾಜನ್, ರಮೇಶ್, ಕುಮಾರನ್, ವಿಜು, ಪಕ್ಷದ ಮುಖಂಡರಾದ ಶಿವರಾಮನ್, ಚಂದ್ರನ್,ಉದಯಕುಮಾರ್, ಮೋನಪ್ಪ, ಮುಸ್ತಾಫ, ರವಿ, ಶೌಕತ್ತಲಿ, ನಾರಾಯಣ, ಹಬೀಬ್, ಬೊಜಿ, ಲಲಿತಾ, ಪಟ್ಟು, ಮುತ್ತು ಇನ್ನಿತರರು ಭಾಗವಹಿಸಿದ್ದರು.