ಜಿಲ್ಲೆ

ಕಬ್ಬಿನ ಬೆಲೆ ಹೆಚ್ಚಿಸಲು ಆಗ್ರಹಿಸಿ ಪ್ರತಿಭಟನೆ

ವಿದ್ಯಾ ಶೆಟ್ಟನಗೌಡ್ರ

ಸಂಕೇಶ್ವರ: ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ೩,೫೦೦ ರೂ. ದರ ಘೋಷಿಸಬೇಕು ಎಂದು ರೈತರು ಸಮೀಪದ ಕಮತನೂರ ಗೇಟ್ ಬಳಿ ರಸ್ತೆ ಸಂಚಾರ ತಡೆದು ಭಾನುವಾರ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದರೂ ಚುನಾಯಿತ ಪ್ರತಿನಿಧಿಗಳು ಸ್ಪಂದಿಸದಿರುವ ಕಾರಣ ನಮ್ಮ ಹೋರಾಟ ಯಾವ ಹಂತಕ್ಕಾದರೂ ತಲುಪಬಹುದು ಎಂದು ಎಚ್ಚರಿಕೆ ನೀಡಿದರು. ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಕಬ್ಬಿನ ಬೆಲೆ ಹೆಚ್ಚುತ್ತಿಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ತಾಲೂಕು ಅಧ್ಯಕ್ಷ ಸಂಜೀವ ಹಾವಣ್ಣವರ ಮಾತನಾಡಿ, ಮಹಾರಾಷ್ಟ್ರದಲ್ಲಿ ಕಬ್ಬಿಗೆ ಈಗಾಗಲೇ ೩೫೦೦ ರೂ. ದರ ಘೋಷಿಸಿದ್ದು, ಅದರಂತೆ ರಾಜ್ಯದಲ್ಲಿಯೂ ಕಬ್ಬಿಗೆ ಯೋಗ್ಯ ಬೆಲೆ ನಿಗದಿ ಮಾಡಬೇಕು ಎಂದರು.

ಎಪಿಎಂಸಿ ಮಾಜಿ ಸದಸ್ಯ ಶಾಂತೇಶಗೌಡ ಪಾಟೀಲ ಮಾತನಾಡಿ, ನ.೪ರಂದು ಹುಕ್ಕೇರಿ ಬಂದ್ ಮೂಲಕ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ಬಿಸಿ ಮುಟ್ಟಿಸಲಾಗುವುದು ಎಂದರು.

ತಾಲೂಕು ಉಪಾಧ್ಯಕ್ಷ ನಾಗರಾಜ ಹಾದಿಮನಿ, ಕಮತನೂರ ಸಿದ್ಧೇಶ್ವರ ಆಶ್ರಮದ ಕೃಪಾನಂದ ಸ್ವಾಮೀಜಿ ಮಾತನಾಡಿದರು.

ರಸ್ತೆಗೆ ಅಡ್ಡಲಾಗಿ ಟ್ರ್ಯಾಕ್ಟರ್ ಳನ್ನು ನಿಲ್ಲಿಸಿ ರಸ್ತೆ ಸಂಚಾರ ತಡೆದಿದ್ದರಿಂದ ಸಂಕೇಶ್ವರ-ಗೋಕಾಕ, ಚಿಕ್ಕೋಡಿ-ಬೆಳಗಾವಿ ರಸ್ತೆಯಲ್ಲಿ ಸಂಚಾರ ದಟ್ಟನೆ ಎದುರಾಯಿತು. ಮುಖಂಡರಾದ ಶಿವಗೌಡ ಪಾಟೀಲ, ರಾಜು ಸಂಕವ್ವಗೋಳ, ಶಾಂತಿನಾಥ ಖಾನಾಪುರೆ, ಶಿವಾನಂದ ಪರಸಣ್ಣವರ, ಚಂದ್ರಶೇಖರ ಮಗದುಮ್ಮ ಇತರರಿದ್ದರು.