ಜಿಲ್ಲೆ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

ಬಳ್ಳಾರಿ ; ರಾಜ್ಯ ಸರ್ಕಾರ ಹೆಚ್ಚುವರಿ ಅಬಕಾರಿ ಶುಲ್ಕವನ್ನು ಕಡಿಮೆಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಇಲ್ಲಿನ ಡಿಸಿ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಮದ್ಯ ಮಾರಾಟಗಾರರ ಸಂಘವು ಶುಕ್ರವಾರ ಪ್ರತಿಭಟನೆ ನಡೆಸಿದರು.

ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ.20% ಲಾಭಾಂಶ ನೀಡಬೇಕು. ಯಾವುದೇ ಕಾರಣಕ್ಕೂ ಸನ್ನದು ಶುಲ್ಕವನ್ನು ಹೆಚ್ಚಳ ಮಾಡಬಾರದು. ಕಾರಣ ಇತ್ತೀಚಿನ ವರ್ಷಗಳಲ್ಲಿ ಸನ್ನದು ಸಂಖ್ಯೆ ಮಾತ್ರ ಹೆಚ್ಚಳ ಆಗಿರುವುದು ಬಿಟ್ಟರೆ ಮದ್ಯ ಮಾರಾಟ ಗಣನೀಯವಾಗಿ ವೃದ್ಧಿಯಾಗಿಲ್ಲ. 2005 ರಲ್ಲಿ ತಿದ್ದುಪಡಿಯಾಗಿರುವ ಅಬಕಾರಿ ಕಾಯ್ದೆ ಕಲಂ 29ನ್ನು ಪುನರ್ ವಿಮರ್ಶಿಸಿ ತಿದ್ದುಪಡಿ ಮಾಡಬೇಕು. ಮದ್ಯ /ಬಿಯರ್ ತಯಾರಿಕಾ ಕಂಪನಿಯವರು ನೀಡುತ್ತಿರುವ ಸ್ಕೀಂಗಳ ಸಂಬಂಧ 11ಎ ತಿದ್ದುಪಡಿ ಮಾಡಲು ಶೀಘ್ರ ಕ್ರಮ ಕೈಗೊಳ್ಳಬೇಕು. ಎಂಆರ್‌ಪಿ ದರಕ್ಕಿಂತ ಕಡಿಮೆ ದರದಲ್ಲಿ ಮತ್ತು ಸ್ಕೀಂ ನೀಡುವ ಸನ್ನದುಗಳಿಗೆ ಗರಿಷ್ಠ ಮಂಡನೆ ವಿಧಿಸಲು ಕಾನೂನು ರೂಪಿಸಬೇಕು. ಪೊಲೀಸ್ ಇಲಾಖೆಯು ಹಸ್ತಕ್ಷೇಪ ಮತ್ತು ಅನಗತ್ಯವಾಗಿ ಸನ್ನದುಗಳನ್ನು ಬಂದ್ ಮಾಡುತ್ತಿರುವ ಕುರಿತು ಸರ್ಕಾರ ಮಧ್ಯ ಪ್ರವೇಶಿಸಿ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು. ಸನ್ನದುದಾರರಿಗೆ ವಿಧಿಸುವ ಸಾಮಾನ್ಯ ಮೊಕದ್ದಮೆಗಳಿಗೆ ರಾಜಿ ಮೂಲಕ ವಿಧಿಸುವ ದಂಡನೆ ಕಡಿಮೆ ಮಾಡಿ ಲೈಸನ್ಸ್ ರಹಿತವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ದಂಡನೆ ಹೆಚ್ಚಳ ಮಾಡುವ ಕುರಿತು ಮತ್ತು ಡಾಬಾ, ಮಾಂಸಹಾರಿ ಹೊಟೇಲ್, ಹಳ್ಳಿಗಳಲ್ಲಿ ಮದ್ಯ ಮಾಡುವುದನ್ನು ನಿಯಂತ್ರಿಸಲು ಕಠಿಣ ಕಾನೂನು ರಚಿಸಬೇಕು. ಎಆರ್‌ಒಇಡಿ ಅನ್ನು ಪುನರ್ ಪರಿಶೀಲಿಸಿ ರದ್ದುಗೊಳಿಸಬೇಕು. ಮದ್ಯ ಮಾರಾಟದ ವೇಳೆಯನ್ನು ಸಿಎಲ್ ಏಳರಂತೆ ಬದಲಾಯಿಸಿ ಬೆಳಗ್ಗೆ ಒಂಬತ್ತ ರಿಂದ 12 ಗಂಟೆಯವರೆಗೆ ಮಾಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.