ಜಿಲ್ಲೆ

ಬೆಳೆ ಹಾನಿ ಪರಿಹಾರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

ವೀರೇಶ ಸೌದ್ರಿ

ಹಿರೇಕೆರೂರ: ಅತಿವೃಷ್ಟಿಯಿಂದ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಕೂಡಲೇ ರಾಜ್ಯ ಸರ್ಕಾರ ರೈತರಿಗೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಯೋಜನೆಯಡಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ತಾಲೂಕು ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತ ಸಂಘದಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಸಾಮೂಹಿಕವಾಗಿ ಅರ್ಜಿ ಸಲ್ಲಿಸಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ಸುರಿದ ಮಳೆಯಿಂದಾಗಿ ಹಾಳಾದ ಬೆಳೆಗಳ ನಷ್ಟ ಮತ್ತು ಬೆಳೆವಿಮೆಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಲಾಗಿತ್ತು. ತಹಸೀಲ್ದಾರರು ಹಾಗೂ ಕೃಷಿ ಉಪನಿರ್ದೇಶಕರು ಸರ್ವೇ ಮಾಡಿ ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದ್ದರು. ಆದರೆ ಈವರೆಗೂ ಯಾವುದೇ ಅಧಿಕಾರಿಗಳು ಜಮೀನುಗಳಿಗೆ ತೆರಳಿ ಬೆಳೆನಷ್ಟದ ಮಾಹಿತಿ ಪಡೆದುಕೊಂಡಿಲ್ಲ ಎಂದು ದೂರಿದರು.

ರೈತರು ಈ ಬಾರಿ ಎರಡೆರಡು ಬಾರಿ ಬಿತ್ತನೆ ಮಾಡಿ ಹಣ ವ್ಯಯ ಮಾಡಿ ಸಂಕಷ್ಟ ಎದುರಿಸುತ್ತಿದ್ದು, ರೈತರೆಲ್ಲ ಸಾಮೂಹಿಕವಾಗಿ ಬೆಳೆಹಾನಿ ಅರ್ಜಿ ಸಲ್ಲಿಸಿದ್ದೇವೆ. ಕೂಡಲೇ ಅಧಿಕಾರಿಗಳು ಸಮೀಕ್ಷೆ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ರಾಜ್ಯ ಸಂಚಾಲಕ ಮಾಲತೇಶ ಪೂಜಾರ, ತಾಲೂಕು ಘಟಕದ ಅಧ್ಯಕ್ಷ ಪ್ರಭುಗೌಡ ಪ್ಯಾಟಿ, ಮಹ್ಮದ್‌ಗೌಸ್ ಪಾಟೀಲ, ಗಂಗನಗೌಡ ಮುದಿಗೌಡ್ರ, ಶಾಂತನಗೌಡ ಪಾಟೀಲ, ಸೇರಿದಂತೆ ರೈತ ಮುಖಂಡರು ವಿವಿದ ಗ್ರಾಮಗಳ ರೈತರಿದ್ದರು.