ತಿ.ನರಸೀಪುರ : ಪಟ್ಟಣದಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಾಣಕ್ಕೆ ಆಗ್ರಹಿಸಿ ಶಾಲಾ ಕಾಲೇಜುಗಳ ಕ್ರೀಡಾಪಟುಗಳು, ವಾಯುವಿಹಾರಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಭಾನುವಾರ ‘ಮ್ಯಾರಥಾನ್ ನಡಿಗೆ ಕ್ರೀಡಾಂಗಣದ ಕಡೆಗೆ’ ಘೋಷ ವಾಕ್ಯದೊಡನೆ ಪ್ರತಿಭಟನೆ ನಡೆಸಿದರು.
ಕ್ರೀಡಾಂಗಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯಲು ಸಮವಸ್ತ್ರ ಧರಿಸಿ ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಲ್ಲಿ ಜಮಾವಣೆಗೊಂಡಿದ್ದ ಹೋರಾಟಗಾರರು, ಕಾಲೇಜು ರಸ್ತೆ, ಲಿಂಕ್ ರಸ್ತೆ ಹಾಗೂ ಪುರಸಭೆ ರಸ್ತೆಗಳಲ್ಲಿ ಸಂಚರಿಸಿ, ಹಕ್ಕೊತ್ತಾಯದ ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿ ಆವರಣಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.
ತಾಲೂಕು ಕೇಂದ್ರದಲ್ಲಿಯೇ ಕ್ರೀಡಾಂಗಣ ನಿರ್ಮಾಣವಾಗಬೇಕೆಂದು ಪಟ್ಟು ಹಿಡಿದಿರುವ ಹೋರಾಟ ಸಮಿತಿಯ ಕರೆಯ ಹಿನ್ನೆಲೆಯಲ್ಲಿ ಕಿರಿಯರು-ಹಿರಿಯರು, ಯುವಕ-ಯುವತಿಯರು, ನೌಕರರು-ನಿವೃತ್ತರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಬಿಸಿಲ ಲೆಕ್ಕಿಸದೆ ಮ್ಯಾರಥಾನ್ ನಡಿಗೆಯಲ್ಲಿ ಹೆಜ್ಜೆ ಹಾಕಿದರು. ಸ್ಕೇಟಿಂಗ್ ಶೂ, ಕರಾಟೆ ತರಬೇತಿ ವಸ್ತ್ರಧರಿಸಿ ಹಾಗೂ ಕ್ರಿಕೆಟ್ ಬ್ಯಾಟ್‌ಬಾಲ್‌ಗಳನ್ನು ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಕ್ಕಳು ಗಮನ ಸೆಳೆದರು. ತಾಲೂಕು ಕಚೇರಿ ಮುಂಭಾಗ ಹಲವು ತಾಸುಗಳ ಕಾಲ ಧರಣಿ ಕುಳಿತು ಕ್ರೀಡಾಂಗಣ ನಿರ್ಮಾಣಕ್ಕಾಗಿ ಒತ್ತಾಯಿಸಲಾಯಿತು. ನಂತರ ಶಿರಸ್ತೇದಾರ್ ಮಂಜುಳಾ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಮ್ಯಾರಥಾನ್ ನಡಿಗೆ ಹೋರಾಟಕ್ಕೆ ಚಾಲನೆ ನೀಡಿದ ಹಿರಿಯ ಅಥ್ಲೆಟಿಕ್ ಸೋಸಲೆ ಮಹದೇವ ಮಾತನಾಡಿ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ದೇಶ-ವಿದೇಶಗಳ ಮಟ್ಟದಲ್ಲಿ ಸಾಧನೆ ಮಾಡಿದವರ ತವರೂರು ತಿರುಮಕೂಡಲು ನರಸೀಪುರದಲ್ಲಿ ಕ್ರೀಡಾಂಗಣ ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ. ಕ್ರೀಡಾಂಗಣ ಎಲ್ಲ ಜನರಿಗೂ ಅಗತ್ಯವಾಗಿದ್ದು, ರಾಜ್ಯವನ್ನಾಳುವ ಮುಖ್ಯ ಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಕ್ರೀಡಾಂಗಣ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹೋರಾಟ ಸಮಿತಿಯ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಮತ್ತು ಈ ಭಾಗದ ಜನಪ್ರತಿನಿಧಿಗಳ ಗಮನ ಸೆಳೆಯಲು ಮ್ಯಾರಥಾನ್ ನಡಿಗೆ ಹೋರಾಟವನ್ನು ಪ್ರಾಯೋಗಿಕವಾಗಿ ನಡೆಸಿದ್ದೇವೆ. ಕ್ರೀಡಾಂಗಣ ನಿರ್ಮಾಣದ ವಿಚಾರದಲ್ಲಿ ನಿರ್ಲಕ್ಷೃ ಹೀಗೆ ಮುಂದುವರಿದರೆ ಹೋರಾಟದ ಸ್ವರೂಪ ಬದಲಾಗಲಿದೆ. ಹಾಗಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಎತ್ತೇಚ್ಚು ಆಡಳಿತಾತ್ಮಕ, ತಾಂತ್ರಿಕ ಸಮಸ್ಯೆ ಬಗೆಹರಿಸಿ ಕ್ರೀಡಾಂಗಣ ನಿರ್ಮಾಣ ಮಾಡಬೇಕು. ತಪ್ಪಿದಲ್ಲಿ ತೀವ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಹಿರಿಯ ದೈಹಿಕ ಶಿಕ್ಷಕ ಆರ್. ಎಸ್.ಬಸವರಾಜು ಮಾತನಾಡಿ, ಕ್ಷೇತ್ರ ಶಾಸಕರಾಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಮಹದೇವಪ್ಪ ಅವರು ಮನಸ್ಸು ಮಾಡಿದರೆ ಮುಂದಿನ ವರ್ಷದೊಳಗೆ ಭವ್ಯವಾದ ಕ್ರೀಡಾಂಗಣ ತಲೆ ಎತ್ತಲಿದೆ. ಉಭಯ ನಾಯಕರು ತಾಲೂಕಿನ ಕ್ರೀಡಾಪಟುಗಳು ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಆಕಾಂಕ್ಷೆ ಅರಿತು ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದರು.
ಹೋರಾಟ ಸಮಿತಿ ಅಧ್ಯಕ್ಷ ಎಂ.ರಮೇಶ್ ಮಾತನಾಡಿ, ನಮ್ಮೂರಿನವರೇ ಆಗಿರುವ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ಸದಸ್ಯರು ಪಟ್ಟಣದ ಹೃದಯ ಭಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲು ನಿವೇಶನ ಕಲ್ಪಿಸಿ ಕೊಡಬೇಕು. ಗ್ರಾಮೀಣ ಪ್ರದೇಶಗಳ ರೈತರ ಮಕ್ಕಳು ಪ್ರತಿಭಾನ್ವಿತ ಕ್ರೀಡಾಪಟುಗಳಾಗಿ ಭವಿಷ್ಯ ರೂಪಿಸಿಕೊಳ್ಳಲು ಸಹಕಾರ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿಯ ಮುಖಂಡ, ಶಸ್ತ್ರಚಿಕಿತ್ಸಕ ಡಾ.ರೇವಣ್ಣ, ವೀರಶೈವ-ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ.ಎಂ. ಪ್ರಕಾಶ್, ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಸಂಯೋಜಕ ಜಿ.ಎಲ್. ತ್ರಿಪುರಾಂತಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ, ಕುಪ್ಯ ಪುಟ್ಟಸ್ವಾಮಿ ಸೇರಿದಂತೆ ರಾಷ್ಟ್ರೀಯ ಕ್ರೀಡಾಪಟುಗಳು ಭಾಗವಹಿಸಿದ್ದರು.
ಹೋರಾಟದ ನಡಿಗೆಯಲ್ಲಿ ಕ್ರೀಡಾಂಗಣ ಹೋರಾಟ ಸಮಿತಿ ಸಂಚಾಲಕರಾದ ಆರ್.ಮಣಿಕಂಠ ರಾಜ್‌ಗೌಡ, ಎಚ್.ಆರೀಫ್, ಯದು ಸ್ಕೈ ಪಾರ್ಕ್‌ನ ಎಂ.ಪ್ರವೀಣ್ ಕುಮಾರ್, ಶಿವಶಂಕರ್ ಸ್ಪೋರ್ಟ್ಸ್ ಅಕಾಡೆಮಿ ನವೀನ್ ಕುಮಾರ್, ಬಾಲು ಮುರುಗೇಶ್, ಮಹೇಶ್, ರಘು, ಪುರಸಭಾ ಸದಸ್ಯರಾದ ಬಾದಾಮಿ ಮಂಜು, ತುಂಬಲ ಪ್ರಕಾಶ್, ಮೆಡಿಕಲ್ ನಾಗರಾಜ್, ಎಸ್.ಕೆ.ಕಿರಣ್, ಹೇಮಂತ್ ಪರಮೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ದೈಹಿಕ ಶಿಕ್ಷಕರಾದ ಪುಟ್ಟರಾಜು, ಜಯಪ್ಪ, ಸಿದ್ದೇಶ್, ಪ್ರಾಂಶುಪಾಲ ಎಚ್.ವಿ.ಉದಯ್ ಕುಮಾರ್, ಉಪನ್ಯಾಸಕ ಕುಮಾರಸ್ವಾಮಿ, ಯೋಗೇಶ್, ನಿವೃತ್ತ ಶಿಕ್ಷಕರಾದ ಎಚ್.ಡಿ.ಮಾದಪ್ಪ, ಉಪನ್ಯಾಸಕರಾದ ಟಿ.ಎಸ್.ಬಸವಣ್ಣ ಸ್ವಾಮಿ, ರೇಷ್ಮಾ ಚಂಗಪ್ಪ, ಸುನಿತಾ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಟ್ಟಸ್ವಾಮಿ, ರೈತ ಮುಖಂಡರಾದ ಕುರುಬೂರು ಸಿದ್ದೇಶ್, ಗೌರಿಶಂಕರ್, ಬೂದಹಳ್ಳಿ ಶಂಕರ್, ಸುಜ್ಜಲೂರು ಚಂದ್ರಶೇಖರ್, ದಸಂಸ ಮುಖಂಡರಾದ ಕುಕ್ಕೂರು ರಾಜು, ಯಾಚೇನಹಳ್ಳಿ ಸೋಮಶೇಖರ್, ಆಲ್ಗೂಡು ನಾಗರಾಜ್‌ಮೂರ್ತಿ, ಬನ್ನಳ್ಳಿಹುಂಡಿ ಉಮೇಶ್, ಬಿಲಗೆರೆಹುಂಡಿ ಶಿವಕುಮಾರ್, ಕಿರಗಸೂರು ಶಿವು, ಹಸು ವಟ್ಟಿ ಆನಂದ್, ವಕೀಲರಾದ ಮಹದೇವಸ್ವಾಮಿ, ಕೃಷ್ಣಮೂರ್ತಿ, ಜ್ಞಾನೇಂದ್ರ ಮೂರ್ತಿ, ಪರಮೇಶ್, ಕ್ರೀಡಾಭಿಮಾನಿಗಳಾದ ನಿಕಿಲ್ ವಿರಾಟ್, ತುಂಬಲ ರೇವಣ್ಣ, ರವಿಚಂದ್ರ, ಜಯಕುಮಾರ್, ಕಾಟ್ಲ ಮಹೇಶ್, ಇಮ್ರಾನ್, ಆಲಗೂಡು ಬಸವರಾಜು, ಚಂದ್ರು, ಉಮೇಶ್, ಬೆನಕನಹಳ್ಳಿ ಗಂಗಾಧರ್, ವಿಕ್ಕಿ, ಯೋಗೇಶ್ ಹಾಗೂ ಇತರರು ಇದ್ದರು.