ಸರಗೂರು: ತಾಲೂಕಿನ ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಡದಹಳ್ಳಿ ಹಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಹಾಗೂ ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ ಸದಸ್ಯರು ರಸ್ತೆಯಲ್ಲೇ ಗಿಡ ನೆಟ್ಟುವ ಮೂಲಕ ಶುಕ್ರವಾರ ಪ್ರತಿಭಟ ನೆ ನಡೆಸಿದರು.
ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ ಅಧ್ಯಕ್ಷ ಸುನೀಲ್ ಮಾತನಾಡಿ, ಟಿ.ಆರ್.ದಡದಹಳ್ಳಿ ಹಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಹಣ ಮಂಜೂರಾಗಿ ಹಲವು ತಿಂಗಳು ಕಳೆದಿದ್ದರೂ ಈವರೆಗೂ ಕೆಲಸ ಪ್ರಾರಂಭವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಬೇಸಿಗೆಯಲ್ಲಿ ಬಿದ್ದ ಒಂದು ದಿನದ ಮಳೆಯಿಂದಾಗಿಯೇ ಆಳವಾದ ಗುಂಡಿಗಳಲ್ಲಿ ನೀರು ತುಂಬಿಕೊಂಡು ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಈ ಹಾಡಿಯಿಂದ ಶಾಲೆಗೆ ಹೋಗುವ ಮಕ್ಕಳು ಈ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಶಾಲೆಗೂ ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಅನಾರೋಗ್ಯ ಪೀಡಿತರು, ಬಾಣಂತಿಯರು, ಗರ್ಭಿಣಿಯರು, ವೃದ್ಧರು ಈ ರಸ್ತೆಯಲ್ಲಿ ಸಂಚರಿಸಲು ಆಗುವುದಿಲ್ಲ. ಜನಪ್ರತಿನಿಧಿಗಳಿಗೆ ನೀಡಲಾಗುವ ಸಂಬಳ, ಭತ್ಯೆ ಹೆಚ್ಚಳ ವಿಚಾರದಲ್ಲಿ ವಿಳಂಬವಾಗುವುದಿಲ್ಲ. ಆದರಿಲ್ಲಿ ಜನ ಸಾಮಾನ್ಯರ ಕೆಲಸ ಮಾಡುವಾಗ ವಿನಾಕಾರಣ ವಿಳಂಬ ಮಾಡುವುದು ಖಂಡನೀಯ ಎಂದರು.
ಹಾಗಾಗಿ ಕೂಡಲೇ ಮಳೆಗಾಲ ಪ್ರಾರಂಭವಾಗುವ ಮುನ್ನವೇ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿ ಕೆಲಸವನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಹಾಡಿ ಮುಖಂಡರಾದ ನಂಜುಂಡ, ಕಾವ್ಯಾ, ರೇಖಾ, ಶ್ರೀಧರ್, ಸೋಮಣ್ಣ, ಚಿಕ್ಕಮ್ಮ, ಕಾಳ, ಕರಿಯ, ಬೊಮ್ಮ, ಕುಳ್ಳಮ್ಮ, ಭಾಗ್ಯಾ ಸೇರಿದಂತೆ ಹಾಡಿಯ ಜನರು ಭಾಗವಹಿಸಿದ್ದರು.