ಮೈಸೂರು: ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗವನ್ನು ತೆರವುಗೊಳಿಸುವಂತೆ ಒತ್ತಾಯಿಸಿ ನಂಜನಗೂಡು ತಾಲೂಕು ಮಾದನಹಳ್ಳಿಯ ಗಿರೀಶ್ ಅವರು ಕುಟುಂಬದವರೊಂದಿಗೆ ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಇರುವ ಸರ್ಕಾರಿ ಜಾಗವನ್ನು ಗ್ರಾಮ ಪಂಚಾಯಿತಿಯ ಹಾಲಿ ಹಾಗೂ ಮಾಜಿ ಸದಸ್ಯರಾದ ಶಿವಣ್ಣ, ಮಲ್ಲಿಕಾರ್ಜುನ, ಬಸವರಾಜು, ಮಹದೇವಪ್ಪ ಸೇರಿದಂತೆ ಇತರರು ಒತ್ತುವರಿ ಮಾಡಿಕೊಂಡಿದ್ದಾರೆ.
ಗ್ರಾಮದ ಸರ್ವೇ ನಂಬರ್ 12/1, 12/2, 13/10ಕ್ಕೆ ಸೇರಿದ ಜಮೀನಿನಲ್ಲಿ ಮನೆ ಕಟ್ಟಲು ಸರ್ಕಾರ ಬಡವರಿಗೆ ಹಂಚಿಕೆ ಮಾಡಿದೆ. ಆದರೆ ಈ ಜಾಗದಲ್ಲಿ ಮನೆ ಕಟ್ಟಲು ಬಿಡದೆ ಪ್ರಭಾವಿಗಳೇ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ವಿರೋಧಿಸಿ ಕಳೆದ ನವೆಂಬರ್ 16ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗಿತ್ತು. ಹೀಗಾಗಿ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಸರಿಯಾಗಿ ಪರಿಶೀಲನೆ ಮಾಡದೆ, ದಾಖಲೆಯನ್ನು ನೀಡದೆ ಕೇವಲ ಬಿಳಿ ಹಾಳೆಯಲ್ಲಿ ಮನೆ ಕಟ್ಟಲು ಅನುಮತಿ ನೀಡಲಾಗಿದೆ ಎಂದು ಬರೆದುಕೊಟ್ಟಿದ್ದಾರೆ. ಈ ಪತ್ರ ಹಿಡಿದು ಹೋದರೆ ಜಾಗ ನಮಗೆ ಸೇರಿದ್ದು, ಮನೆಕಟ್ಟಲು ಸಾಧ್ಯವಿಲ್ಲ ಎಂದು ತಕರಾರು ಮಾಡುತ್ತಿದ್ದಾರೆ ಎಂದು ದೂರಿದರು.
ಹೀಗಾಗಿ, ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಒತ್ತುವರಿಯನ್ನು ತೆರವುಗೊಳಿಸಿ ಬಡವರು ಮನೆ ನಿರ್ಮಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಗಿರೀಶ್ ಅವರ ಪತ್ನಿ, ತಾಯಿ, ಮಕ್ಕಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.