ಜಿಲ್ಲೆ

ಗ್ಯಾಂಗ್​ರೇಪ್ ಆರೋಪಿಗಳ ಜಾಮೀನು ರದ್ದತಿಗೆ ಒತ್ತಾಯಿಸಿ ಪ್ರತಿಭಟನೆ

ಅಕ್ಕಿಆಲೂರ: ರೋಡ್ ಶೋ ನಡೆಸಿದ ಗ್ಯಾಂಗ್​ರೇಪ್ ಆರೋಪಿಗಳ ಜಾಮೀನು ರದ್ದುಪಡಿಸಿ, ಇನ್ನುಳಿದ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಪಟ್ಟಣದಲ್ಲಿ ಜಾಗೃತ ಮಹಿಳಾ ವೇದಿಕೆಯಿಂದ ಗುರುವಾರ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.

ಪಟ್ಟಣದ ವಿರಕ್ತಮಠದಿಂದ ಪ್ರಮುಖ ಬೀದಿಗಳಲ್ಲಿ ಸಾಗಿ ಸಿಂಧೂರ ಸಿದ್ದಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಲಾಯಿತು.

ಹೆಣ್ಣಿನ ಸಾಮೂಹಿಕ ಅತ್ಯಾಚಾರ ಘಟನೆಯಿಂದ ಹಾವೇರಿ ಜಿಲ್ಲೆಯ ಜನ ತಲೆತಗ್ಗಿಸುವಂತಾಗಿದೆ. ನಾಗರಿಕರ ಸಮಾಜ ನಾಚಿಕೊಳ್ಳುವ ಕೃತ್ಯದಲ್ಲಿ ಭಾಗಿಯಾಗಿ, ಜಾಮೀನನ ಮೇಲೆ ಹೊರಗೆ ಬಂದು, ರೋಡ್ ಶೋ ನಡೆಸಿ, ನಮ್ಮ ಕಾನೂನು ವ್ಯವಸ್ಥೆ ಪ್ರಶ್ನಿಸುವ ವಾತಾವರಣ ನಿರ್ವಿುಸಿದ ಆರೋಪಿಗಳ ಜಾಮೀನು ರದ್ದುಪಡಿಸಬೇಕು ಎಂದು ಒತ್ತಾಯಿಸಲಾಯಿತು.

ರೋಡ್ ಶೋದಲ್ಲಿ ಭಾಗಿಯಾದ ಇನ್ನುಳಿದವರ ಬಂಧನಕ್ಕೆ ಪೊಲೀಸ್ ಇಲಾಖೆ ಹಿಂದೇಟು ಹಾಕುತ್ತಿದೆ. ಮಹಿಳೆಯ ಮೇಲೆ ದೌರ್ಜನ್ಯ ಎಸಗಿ, ಜೈಲು ಸೇರಿ ಅಲ್ಲಿಯೂ ಗೂಂಡಾವರ್ತನೆ ತೋರಿ, ಹೊರಗೆ ಬಂದು ರೋಡ್ ಶೋ ನಡೆಸಿದವರಿಗೆ ಜೀವಾವಧಿ ಶಿಕ್ಷೆ ನೀಡುವ ಮೂಲಕ ಸಮಾಜ ಮತ್ತು ಕಾನೂನು ಇಂತಹ ಘಟನೆ ಸಹಿಸುವುದಿಲ್ಲ ಎಂಬ ಸಂದೇಶ ಸಾರಬೇಕು. ಇಲ್ಲವಾದರೆ ಮತ್ತೆ ಇಂತಹ ಕೃತ್ಯಗಳು ನಡೆಯುತ್ತವೆ. ಈ ಪ್ರಕರಣ ಗಂಭೀರವಾಗಿ ಪರಿಗಣಿಸದಿದ್ದರೆ ಜಿಲ್ಲಾ ವ್ಯಾಪ್ತಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಹಾನಗಲ್ಲ ಪಿಎಸ್​ಐ ಸಂಪತ್ ಆನಿಕಿವಿ ಅವರಿಗೆ ಮನವಿ ಸಲ್ಲಿಸಲಾಯಿತು. ಅಕ್ಕಿಆಲೂರಿನ ಎಲ್ಲ ಮಹಿಳಾ ಸಂಘಟನೆ ಪದಾಧಿಕಾರಿಗಳು, ಮಹಿಳಾ ಗ್ರಾಪಂ ಸದಸ್ಯರು, ಸಾಂಸ್ಕೃತಿಕ ಸಂಘಟನೆಗಳ ಪದಾಧಿಕಾರಿಗಳು, ಹಿಂದುಪರ ಸಂಘಟನೆಗಳ ಕಾರ್ಯಕರ್ತರು, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.