ಜಿಲ್ಲೆ

ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

ವೀರೇಶ ಸೌದ್ರಿ

ಶಿರಸಿ: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸರಿಯಾದ ಸಮಯಕ್ಕೆ ಬಸ್ ಸಂಚಾರ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಸಮೀಪದ ಭಾಶಿ ಗ್ರಾಮಸ್ಥರು, ವಿದ್ಯಾರ್ಥಿಗಳು ಬಸ್ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಗಜಾನನ ಗೌಡ ಮಾತನಾಡಿ, ಬೆನ್ನೂರುನಿಂದ ಮೊಗವಳ್ಳಿ, ಭಾಶಿ ಮಾರ್ಗವಾಗಿ ಬೆಳಗ್ಗೆ 9.30ಕ್ಕೆ ಬನವಾಸಿಗೆ ಸಂಚರಿಸುವ ಸರ್ಕಾರಿ ಬಸ್ ಕಳೆದ ಎರಡು ತಿಂಗಳಿನಿಂದ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಇದರಿಂದಾಗಿ ತೊಂದರೆಯಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಸರಿಯಾದ ಸಮಯಕ್ಕೆ ಶಾಲಾ, ಕಾಲೇಜುಗಳಿಗೆ ಹಾಜರಾಗಲು ಸಾಧ್ಯವಾಗದೇ ಪರದಾಡುವಂತಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಸ್ ತಡೆದು ಅಧಿಕಾರಿಗಳನ್ನು ಎಚ್ಚರಿಸಿದ್ದೇವೆ ಇದೇ ರೀತಿ ಮುಂದುವರಿದರೆ ಸಾರ್ವಜನಿಕರು, ಪಾಲಕರು, ವಿದ್ಯಾರ್ಥಿಗಳು ಬನವಾಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಗ್ರಾಮಸ್ಥರಾದ ವೀರೇಂದ್ರ ಗೌಡ, ವೀರಭದ್ರ ಗೌಡ, ನಟರಾಜ ನಾಯ್ಕ, ರಘುಪತಿ ನಾಯ್ಕ, ಮಾದೇವ ಚನ್ನಯ್ಯ, ಬಸವರಾಜ ಚನ್ನಯ್ಯ, ರಮೇಶ ಚನ್ನಯ್ಯ, ನೂರಾರು ವಿದ್ಯಾರ್ಥಿಗಳು ಇದ್ದರು.