ಜಿಲ್ಲೆ

ಕಾಡಾನೆ ಹಾವಳಿ ತಪ್ಪಿಸಲು ಆಗ್ರಹಿಸಿ ಪ್ರತಿಭಟನೆ

Hassan

ಆಲೂರು: ಮಿತಿಮೀರಿದ ಕಾಡಾನೆ ಹಾವಳಿ ತಪ್ಪಿಸಬೇಕೆಂದು ಆಗ್ರಹಿಸಿ ಅಂಜಳಿಗೆ ಗ್ರಾಮದ ರೈತರು, ಕಾರ್ಮಿಕರು ಹಾಗೂ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಮುಖ್ಯರಸ್ತೆಯಲ್ಲಿ ಧರಣಿ ನಡೆಸಿ ಕಾಡಾನೆ ಹಾವಳಿಯಿಂದ ನಮಗೆ ಮುಕ್ತಿ ದೊರಕಿಸಿ, ನಮ್ಮ ಹಾಗೂ ನಮ್ಮ ಮಕ್ಕಳನ್ನು ನಿರ್ಭೀತಿಯಿಂದ ಬದುಕಲು ಅವಕಾಶ ಕಲ್ಪಿಸಿ ಎಂದು ಘೋಷಣೆಗಳನ್ನು ಕೂಗಿ ಸ್ಥಳಕ್ಕೆ ಅಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದರು.

ಕಾಣಿಗೆರೆ ರೈತ ನಂದಕುಮಾರ್ ಮಾತನಾಡಿ, ಈ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದರೂ ಸರ್ಕಾರ ಮತ್ತು ಅರಣ್ಯ ಅಧಿಕಾರಿಗಳು ಸಮರ್ಪಕ ಹಾಗೂ ಶಾಶ್ವತ ಪರಿಹಾರ ಮಾರ್ಗ ಕಂಡುಕೊಳ್ಳದೆ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೃಷಿ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ರೈತರು ಹಾಗೂ ಕಾರ್ಮಿಕರು ಕಾಡಾನೆ ಹಾವಳಿಗೆ ಕಂಗೆಟ್ಟಿದ್ದಾರೆ. ದೊಡ್ಡಬೆಟ್ಟ ಹಾಗೂ ಚಿಕ್ಕಬೆಟ್ಟ ವ್ಯಾಪ್ತಿಯಲ್ಲಿ 40 ಕಾಡಾನೆಗಳು ಬೀಡು ಬಿಟ್ಟಿರುವುದರಿಂದ ಈ ಭಾಗದ ಜನರು ಜೀವಭಯದಲ್ಲಿ ಬದುಕುವ ಪರಿಸ್ಥಿತಿ ಇದೆ ಎಂದು ಅಳಲು ತೋಡಿಕೊಂಡರು.

ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ರಾಜಪ್ಪ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ಇಲಾಖೆ ವಾಹನಕ್ಕೆ ಮುತ್ತಿಗೆ ಹಾಕಿದರು. ಆನೆ ಹಾವಳಿ ತಪ್ಪಿಸಲು ಕ್ರಮಕೈಗೊಳ್ಳುವ ಭರವಸೆ ನಿಡಿದ ನಂತರ ಪ್ರತಿಭಟನೆ ವಾಪಸ್ ಪಡೆದರು.

ಗ್ರಾಮದ ಧರಣಿ, ಸುರೇಶ್, ಕುಮಾರ್, ಪುರಭೈರವನಹಳ್ಳಿ ಗ್ರಾಮದ ದಶರಥ, ವೆಂಕರಾಮ್, ರೈತರಾದ ಅಡಿಬೈಲು ಸಂತೋಷ್, ಕಾಣಿಗೆರೆ ನಂದಕುಮಾರ್, ಎಚ್.ಬಿ.ಧರ್ಮರಾಜು, ಕೆ. ಹೊಸಕೋಟೆ ಉಪವಲಯ ಅರಣ್ಯಾಧಿಕಾರಿ ಪ್ರದೀಪ್ ಕುಮಾರ್, ಜೈಪಾಲ್ ಹಾಜರಿದ್ದರು.