ಹುಬ್ಬಳ್ಳಿ: ರೈಲ್ವೆ ಕಾರ್ಯಾಗಾರದಲ್ಲಿ ಅಪ್ರೆಂಟಿಸ್ಶಿಪ್ ತರಬೇತಿ ಪೂರ್ಣಗೊಳಿಸಿದವರನ್ನು ನೇರ ನೇಮಕಾತಿಗೆ ಪರಿಗಣಿಸಬೇಕೆಂದು ಆಗ್ರಹಿಸಿ ನೈಋತ್ಯ ರೈಲ್ವೆ ಮಜ್ದೂರ್ ಯೂನಿಯನ್ ಸದಸ್ಯರು ಶುಕ್ರವಾರ ಇಲ್ಲಿಯ ನೈಋತ್ಯ ರೈಲ್ವೆ ಮಹಾಪ್ರಬಂಧಕರ ಕಚೇರಿ ಹಾಗೂ ರೈಲ್ವೆ ಕಾರ್ಯಾಗಾರದ ಎದುರು ಪ್ರತಿಭಟನೆ ನಡೆಸಿದರು.
ಮುಖ್ಯ ಸಿಬ್ಬಂದಿ ಅಧಿಕಾರಿ ಅಲೋಕಕುಮಾರ ಹಾಗೂ ಮುಖ್ಯ ಕಾರ್ಯ ವ್ಯವಸ್ಥಾಪಕ ಉಮೇಶ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ಅಪ್ರೆಂಟಿಸ್ಶಿಪ್ ತರಬೇತಿ ಪಡೆದವರನ್ನು ಗ್ರುಪ್ ಡಿ ಹುದ್ದೆಗೆ 2005ರಿಂದ 2010ರವರೆಗೆ ನೇರ ನೇಮಕಾತಿ ಮಾಡಿಕೊಳ್ಳಲಾಗಿದೆ. 2010ರ ಬಳಿಕ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿರುವ ರೈಲ್ವೆ ಕಾರ್ಯಾಗಾರದಲ್ಲಿ ಸುಮಾರು 2500 ಜನ ಅಪ್ರೆಂಟಿಸ್ಶಿಪ್ ತರಬೇತಿ ಪಡೆದಿದ್ದಾರೆ ಎಂದು ಯೂನಿಯನ್ ಮನವಿಯಲ್ಲಿ ತಿಳಿಸಲಾಗಿದೆ.
ಯೂನಿಯನ್ ಪ್ರಧಾನ ಕಾರ್ಯದರ್ಶಿ ಡಾ. ಎ.ಎಂ. ಡಿಕ್ರೂಜ್, ವಲಯ ಅಧ್ಯಕ್ಷ ಎಸ್.ಎಫ್. ಮಲ್ಲಾಡ, ಖಜಾಂಚಿ ವಿ.ಇ. ಚಾರ್ಖಾನಿ, ಕೆ. ವೆಂಕಟೇಶ, ಅಶೋಕಕುಮಾರ ವಿ., ಸಿ. ಮುರುಗನ್, ಪಿ. ರಂಗಪ್ಪ, ಪ್ರವೀಣ ಪಾಟೀಲ, ಇತರರಿದ್ದರು.