ಗುಂಡ್ಲುಪೇಟೆ: ಅಕ್ರಮ ಗಣಿಗಾರಿಕೆ ಹಾಗೂ ಮಣ್ಣು ಸಾಗಣೆ ಮಾಡುತ್ತಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬುಧವಾರ ಪಟ್ಟಣದಲ್ಲಿ ಕನ್ನಡ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದವು.
ಸಾಮೂಹಿಕ ನಾಯಕತ್ವದ ರೈತ ಸಂಘದ ಕಾರ್ಯಕರ್ತರು ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರೆ ಕನ್ನಡಪರ ಸಂಘಟನೆಗಳಾದ ಕರುನಾಡ ಯುವಸೇನೆ, ಕರ್ನಾಟಕ ರಕ್ಷಣಾ ವೇದಿಕೆಯ ಎರಡೂ ಬಣಗಳು, ಕರ್ನಾಟಕ ಕಾವಲುಪಡೆ ಸೇರಿದಂತೆ ನಾನಾ ಪ್ರಗತಿಪರ ಸಂಘಗಳ ಪದಾಧಿಕಾರಿಗಳು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅಕ್ರಮವಾಗಿ ಖನಿಜ ಸಾಗಣೆ ಹಾಗೂ ಟಿಪ್ಪರ್ ಹಾವಳಿ ತಡೆಗಟ್ಟುವಂತೆ ಒತ್ತಾಯಿಸಿ ತಹಸೀಲ್ದಾರ್ ಟಿ.ರಮೇಶ್‌ಬಾಬು ಅವರಿಗೆ ಮನವಿ ಸಲ್ಲಿಸಿದರು.
ಸಾರಿಗೆ ಬಸ್ ನಿಲ್ದಾಣದ ಎದುರು ಮಾನವ ಸರಪಳಿ ರಚಿಸಿದ ರೈತ ಕಾರ್ಯಕರ್ತರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು.
ಸಂಘದ ತಾಲೂಕು ಅಧ್ಯಕ್ಷ ನಾಗಪ್ಪ ಮಾತನಾಡಿ, ತಾಲೂಕಿನಲ್ಲಿ ಕಲ್ಲು ಮಣ್ಣು ಅಕ್ರಮ ಸಾಗಣೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಗ್ರಾಮಾಂತರ ಪ್ರದೇಶದ ಎಲ್ಲ ರಸ್ತೆಗಳೂ ಹಾಳಾಗಿದ್ದು ಪದೇ ಪದೆ ಅಪಘಾತಗಳು ಸಂಭವಿಸಿ ಜೀವ ಹಾನಿಯಾಗುತ್ತಿದೆ. ಮಂಗಳವಾರ ಸುಲ್ತಾನ್ ಭತ್ತೇರಿ ರಸ್ತೆಯಲ್ಲಿ ಕೇರಳ ಮೂಲದ ಬೈಕಿನ ಮೇಲೆ ಟಿಪ್ಪರ್ ಹರಿದ ಪರಿಣಾಮ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ. ಇದನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ರೈತ ಸಂಘಟನೆಗಳು ಹಿಂದಿನಿಂದಲೂ ಅಕ್ರಮ ಗಣಿಗಾರಿಕೆ ತಡೆಗಟ್ಟುವಂತೆ ಒತ್ತಾಯಿಸುತ್ತಲೇ ಬಂದಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇನ್ನಾದರೂ ಜಿಲ್ಲಾಡಳಿತ ಅಕ್ರಮಗಳನ್ನು ತಡೆಗಟ್ಟದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಷಣ್ಮುಖಸ್ವಾಮಿ, ಶ್ರೀನಿವಾಸ್, ಸ್ವಾಮಿ, ಸೋಮಶೇಖರ್, ಲೋಕೇಶ್ ಹಾಗೂ ಇತರರು ಇದ್ದರು.