ಹಾಸನ: 2016ರ ಭೂ ಗುತ್ತಿಗೆ ಮಸೂದೆ ವಿರೋಧಿಸಿ ರೈತ ಸಂಘ, ನಗರ ಸಾರಿಗೆ ಬಸ್ ಸಂಖ್ಯೆ ಹೆಚ್ಚಿಸುವಂತೆ ಎಬಿವಿಪಿ, ರಾಷ್ಟ್ರದ್ರೋಹಿ ಹೇಳಿಕೆ ನೀಡುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಹಿಂದು ಜನಜಾಗೃತಿ ವೇದಿಕೆ ಹಾಗೂ ಅಕ್ರಮ ಗಣಿಗಾರಿಕೆ ನಿಷೇಧಕ್ಕೆ ಆಗ್ರಹಿಸಿ ಅರಸೀಕೆರೆ ತಾಲೂಕಿನ ಗ್ರಾಮಸ್ಥರು ಧರಣಿ ನಡೆಸಿದರು.
ಮಸೂದೆಗೆ ತೀವ್ರ ವಿರೋಧ: ಕೃಷಿ ಭೂಮಿಯನ್ನು ಕಂಪನಿಗಳಿಗೆ ಗುತ್ತಿಗೆ ನೀಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಆಗ್ರಹಿಸಿ 2016ರ ಭೂ ಗುತ್ತಿಗೆ ಮಸೂದೆ ಪ್ರತಿ ಸುಟ್ಟು ರಾಜ್ಯ ರೈತ ಸಂಘ, ಸಿಐಟಿಯು, ಕೆಪಿಆರ್‌ಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ಒಪ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. ದೇಶದಲ್ಲಿ ಸುಮಾರು 6.5 ಕೋಟಿ, ರಾಜ್ಯದಲ್ಲಿ 52.5 ಲಕ್ಷ ಎಕರೆ ಬೀಳು ಭೂಮಿ ಇದೆ. ಶೇ. 85ಕ್ಕಿಂತ ಹೆಚ್ಚಿನ ರೈತರು, ಸಣ್ಣ, ಅತಿ ಸಣ್ಣ ರೈತರಾಗಿರುವ ಕಾರಣ ಈ ಭೂಮಿ ಹಿಡುವಳಿಗಳು, ಆಧುನಿಕ ಕೃಷಿಗೆ ಯೋಗ್ಯವಲ್ಲ ಜತೆಗೆ ಆರ್ಥಿಕವಾಗಿಯೂ ಲಾಭದಾಯಕವಲ್ಲ ಎಂಬ ನೆಪವೊಡ್ಡಿ ವಿದೇಶಿ ಕಂಪನಿಗಳಗೆ ಭೂಮಿ ನೀಡಲು ಮುಂದಾಗಿರುವುದು ಖಂಡನೀಯ ಎಂದರು.
ಈ ಕಾಯ್ದೆಯಿಂದ ಕೃಷಿ ಉತ್ಪಾದನೆ, ಕೃಷಿ ಮಾರುಕಟ್ಟೆ ಬಹುರಾಷ್ಟ್ರೀಯ ಕಂಪನಿಗಳ ಸ್ವಾಧೀನಕ್ಕೆ ಹೋಗಿ, ಒಂದು ಕಡೆ ರೈತರು, ಮತ್ತೊಂದು ಕಡೆ ಗ್ರಾಹಕರನ್ನು ವಿಪರೀತ ಶೋಷಣೆ ಮಾಡಲಾಗುತ್ತದೆ. ಭೂಮಿಯ ಫಲವತ್ತತೆ, ಪರಿಸರವನ್ನು ನಾಶ ಮಾಡಲಾಗುತ್ತದೆ ಎಂದು ದೂರಿದರು.
ಯಾವ ಕಾರಣಕ್ಕೂ ಮಸೂದೆ ಅಂಗೀಕಾರ ಪಡೆಯಬಾರದು. ರೈತರ ಹಿತ ಕಡೆಗಣಿಸಿ ಸರ್ಕಾರ ತನ್ನ ಧೋರಣೆ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸ್ಥಾನಿಕ ಸಹಾಯಕ ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಿದರು. ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್‌ಕುಮಾರ್, ವಸಂತ್ ಕುಮಾರ್, ದೇವರಾಜ್, ರೈತ ಸಂಘದ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್ ಇತರರಿದ್ದರು.