ಮಂಡ್ಯ: ಕೋಲ್ಕತ್ತಾ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘ(ಖಾಸಗಿ ಮತ್ತು ಸರ್ಕಾರಿ ವೈದ್ಯರು)ದ ಸದಸ್ಯರು ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಎಲ್ಲ ಖಾಸಗಿ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆ ಹೊರರೋಗಿ ವಿಭಾಗ ಬಂದ ಮಾಡಿ ಮಿಮ್ಸ್ ಆವರಣದಲ್ಲಿ ವೈದ್ಯರು ಜಮಾವಣೆಗೊಂಡರು. ಬಳಿಕ ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬ ಘೋಷಣೆ ಕೂಗಿ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಪ್ರಕರಣ ಕುರಿತು ಸಂಪೂರ್ಣ ನಿರ್ಲಕ್ಷೃ ತೋರಿದೆ. ಕರ್ತವ್ಯ ನಿರತ ವೈದ್ಯೆಗೆ ರಕ್ಷಣೆ ನೀಡುವಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ವಿಫಲವಾಗಿದೆ. ಇವರ ಉದಾಸೀನತೆಯಿಂದ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಆಕ್ರಮಣ ನಡೆದಿದೆ. ವ್ಯೆದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ಟಿ.ಎನ್.ಮರಿಗೌಡ, ಡಾ.ಉಮೇಶ್, ಡಾ.ವಸುಮತಿ, ಡಾ.ಮಂಜುನಾಥ್, ಡಾ.ಯೋಗೇಂದ್ರ ಕುಮಾರ್, ಡಾ.ಗೋಪಾಲಕೃಷ್ಣ ಗುಪ್ತ, ಡಾ.ವಿನಯ್, ಡಾ.ಜಗದೀಶ್‌ಕುಮಾರ್, ಡಾ.ಮೋಹನ್‌ಕುಮಾರ್, ಡಾ.ಜಾಹ್ನವಿ, ಡಾ.ಶೀತಲ್, ಡಾ.ಅಶ್ವಿನಿ, ಡಾ.ಆಶಾಲತಾ, ಡಾ.ಬಿಂದ್ಯಾ ಇತರರಿದ್ದರು.