raichur 
ಜಿಲ್ಲೆ

ಸಿಪಿಐಎಂಎಲ್ ಲಿಬರೇಶನ್ ಅಭ್ಯರ್ಥಿ ಬಂಧನ ಖಂಡಿಸಿ ಪ್ರತಿಭಟನೆ

ರಾಯಚೂರು ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸಿದ ಸಿಪಿಐಎಂಎಲ್ ಲಿಬರೇಶನ್ ಪಕ್ಷದ ಅಭ್ಯರ್ಥಿ ಹಾಗೂ ಹಾಲಿ ಶಾಸಕರ ಬಂಧನ ಖಂಡಿಸಿ ಶನಿವಾರ ಸಿಪಿಐಎಂಎಲ್ ಪಕ್ಷದ ಜಿಲ್ಲಾ ಘಟಕದ ಮುಖಂಡರು ನಗರದ ಮಹಾನಗರ ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.

ಬಿಹಾರ ಚುನಾವಣೆಲ್ಲಿ ನಾಮಪತ್ರ ಸಲ್ಲಿಸಿದ ಕೂಡಲೇ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ಅಭ್ಯರ್ಥಿಗ ಜಿತೇಂದ್ರ ಪಾಸ್ವಾನ್ ಮತ್ತು ದರೌಲಿ ಶಾಸಕ ಸತ್ಯದೇವ್ ರಾಮ್ ಅವರ ಬಂಧಿಸಲಾಗಿದೆ. ಇದು ಸಂವಿಧಾನ ಬಾಹಿರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಫಲ ಆಡಳಿತದ ಕಾರಣ ’ಡಬಲ್-ಎಂಜಿನ್’ ಸರ್ಕಾರದ ವಿರುದ್ಧ ಬಿಹಾರ ಜನತೆ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದು, ಈ ಆಕ್ರೋಶವನ್ನು ಎದುರಿಸಲು ಸಾಧ್ಯವಾಗದ ಬಿಜೆಪಿ-ಜೆಡಿ(ಯು) ಮೈತ್ರಿಕೂಟವು ಪ್ರಜಾತಂತ್ರದ ಧ್ವನಿಯನ್ನು ಹತ್ತಿಕ್ಕಲು ದಮನ-ಬೆದರಿಕೆ ಮೂಲಕ ಪೊಲೀಸ್ ಮತ್ತು ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ.

2013ರಲ್ಲಿ ದಲಿತ ಭೂಹೀನ ಕಾರ್ಮಿಕರು ತಮಗೆ ನ್ಯಾಯಯುತವಾಗಿ ದೊರೆಯಬೇಕಾದ ಭೂಮಿಯನ್ನು ವಶಪಡಿಸಿಕೊಳ್ಳಲು ನಡೆಸಿದ ಹೋರಾಟದ ಸಂದರ್ಭದಲ್ಲಿ ಸತ್ಯದೇವ್ ರಾಮ್ ಅವರ ಮೇಲೆ ಸುಳ್ಳು ಪ್ರಕರಣಗಳನ್ನು ಹೂಡಿ ಜೈಲಿಗೆ ಹಾಕಲಾಗಿತ್ತು. ಸದಾ ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ದುಡಿಯುವ ವರ್ಗದ ಪರವಾಗಿರುವ ಸತ್ಯದೇವ ಅವರು ಬಿಜೆಪಿ ಅಭ್ಯರ್ಥಿಯ ವಿರುದ್ಧ 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಅಷ್ಟೇ ಅಲ್ಲದೇ ಬೋರೇ ಕ್ಷೇತ್ರದ ಅಭ್ಯರ್ಥಿ ಜಿತೇಂದ್ರ ಪಾಸ್ವಾನ್ ಅವರು ತಮ್ಮ ಕ್ಷೇತ್ರದಲ್ಲಿ ಜನರ ವಿಶ್ವಾಸವನ್ನು ಗಳಿಸಿದ್ದು, ಅದನ್ನು ತಡೆಯಲು ಬಿಜೆಪಿ ಮತ್ತು ಜೆಡಿಯು ಮೈತ್ರಿ ಸರ್ಕಾರ ದಬ್ಬಾಳಿಕೆ ನಡೆಸಿ, ಚುನಾವಣೆಗೆ ನಿಲ್ಲದಂತೆ ಅಡೆ-ತಡೆ ಮಾಡಲು ಹೊರಟಿದೆ. ಇದು ಪ್ರಜಾತಂತ್ರ ವಿರೋಧಿ ಕ್ರಮವಾಗಿದ್ದು, ಮೈತ್ರಿ ಸರ್ಕಾರದ ದ್ವೇಷದ ರಾಜಕಾರಣಕ್ಕೆ ಸಾಕ್ಷಿಯಾಗಿದೆಂದು ಆರೋಪಿಸಿದರು.

ಈ ಕೂಡಲೇ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ಅಭ್ಯರ್ಥಿಗಳ ಮೇಲೆ ಬಿಹಾರದಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಬೇಕು ಮತ್ತು ಪ್ರತಿಪಕ್ಷಗಳ ಮೇಲೆ ದಾಳಿ ನಡೆಸುವ ಆಡಳಿತಾರೂಢ ಮೈತ್ರಿ ಸರ್ಕಾರದ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಅಜೀಜ್ ಜಾಗೀರ್ದಾರ್, ಮೊಹಮ್ಮದ್ ಅನೀಸ್ ಅಬಕಾರಿ, ಜಿಲಾನಿ ಯರಗೇರಾ, ನರಸಿಂಹಲು, ನಾಗಣ್ಣ ನಾಯಕ್, ರಮೇಶ, ಮಹೇಶ್, ಮೊಹಮ್ಮದ್ ಗೌಸ್, ತಾಯಪ್ಪ ಸೇರಿ ಅನೇಕರು ಇದ್ದರು.