ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿದು ತೇಜೋವಧೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ದಲಿತ ಮಹಾಸಭಾ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಪುರಭವನದ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸಿದ್ದರಾಮಯ್ಯ ಅವರ ಮೇಲೆ ಸುಳ್ಳು ಆರೋಪ ಮಾಡಿ, ವಾಮಮಾರ್ಗದಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ ನಾಯಕರು ಕುತಂತ್ರ ನಡೆಸುತ್ತಿದ್ದಾರೆ ಎಂದು ದೂರಿದರು.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ 50:50 ಅನುಪಾತದ ನಿವೇಶನಗಳ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತಿದ್ದರು. ಹೈಕೋರ್ಟ್ ಆದೇಶದ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ನಡೆಸುತ್ತಿದ್ದರೂ ಏಕಾಏಕಿ ಬಿಜೆಪಿಯವರು ಲೋಕಾಯುಕ್ತ ತನಿಖೆಯ ಮೇಲೆ ಅಪನಂಬಿಕೆಯ ಮಾತುಗಳನ್ನಾಡುತ್ತಿರುವುದು ನ್ಯಾಯಾಲಯದ ಆದೇಶ ಧಿಕ್ಕರಿಸುವಂತಿದೆ. ಅವರಿಗೆ ದೇಶದ ಕಾನೂನು ಹಾಗೂ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂದು ಕಿಡಿಕಾರಿದರು.
ಕರ್ನಾಟಕ ಲೋಕಾಯುಕ್ತ ದೇಶದಲ್ಲಿಯೇ ಅತ್ಯಂತ ಪ್ರಾಮಾಣಿಕ, ದಕ್ಷತೆ, ನಿಷ್ಪಕ್ಷಪಾತ ತನಿಖೆ ನಡೆಸುವ ಹಾಗೂ ಮಾದರಿ ಸಂಸ್ಥೆಯಾಗಿದೆ. ಈಗ ಲೋಕಾಯುಕ್ತ ತನಿಖೆಯ ಮೇಲೆ ಅವಿಶ್ವಾಸ ಮಂಡಿಸುತ್ತಿರುವುದು ಕೇವಲ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯುವ ಹಾಗೂ ಅವರ ನೈತಿಕತೆ ಕುಗ್ಗಿಸುವ ದ್ವೇಷ ರಾಜಕಾರಣವಷ್ಟೇ ಎಂದು ದೂರಿದರು.
ಮುಖ್ಯಮಂತ್ರಿ ಪದವಿಯಲ್ಲಿ ಇದ್ದರೂ ದೇಶದ ಕಾನೂನಿಗೆ ಗೌರವ ನೀಡಿ ಸಿದ್ದರಾಮಯ್ಯ ಅವರು ಲೋಕಾಯುಕ್ತದ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಿದ್ದಾರೆ. ಹೀಗಿದ್ದರೂ ಸಿಬಿಐ ತನಿಖೆಗೆ ಒತ್ತಾಯಿಸುತ್ತಿರುವುದು ರಾಜಕೀಯಪ್ರೇರಿತ ಎಂದು ದೂರಿದರು.
ಮಹಾಸಭಾ ಅಧ್ಯಕ್ಷ ಎಸ್.ರಾಜೇಶ್, ಸಾಹುಕಾರ್ ಚನ್ನಯ್ಯ, ಬ್ಲಾಕ್‌ನ ಕಾರ್ಯದರ್ಶಿ ಎಸ್.ಎ.ರಹೀಮ್, ರಾಜ್ಯ ಸಂಶೋಧನಾ ಸಂಘದ ಅಧ್ಯಕ್ಷ ಡಾ.ಮರಿದೇವಯ್ಯ, ಎಸ್‌ಸಿ ಘಟಕದ ಕಾರ್ಯದರ್ಶಿ ಕುಕ್ಕರಹಳ್ಳಿ ನಂಜುಂಡಸ್ವಾಮಿ, ಸೇವಾದಳದ ಖಾನ್‌ಪಾಷ, ಮೋಹನ್ ಕುಮಾರ್, ಕಾಂಗ್ರೆಸ್ ಮುಖಂಡ ಫಾಜಿಲ್, ಪ್ರಮೋದ್, ಕನ್ನಡ ಹೋರಾಟಗಾರ ಧನಪಾಲ್, ಕೇಶವ ಕೊಪ್ಪಲು, ಓಂಕಾರ್ ರವಿ ಇತರರು ಇದ್ದರು.