ಜಿಲ್ಲೆ

ರಸ್ತೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

ಪ್ರಸಿನ್ ಕೆ.ಆರ್

ಬೈಲಕುಪ್ಪೆ: ಲಕ್ಷ್ಮೀಪುರದಿಂದ-ದಿಂಡಗಾಡು ಗೇಟ್‌ಗೆ ತೆರಳುವ ರಸ್ತೆ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದೆ ಎಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ರಸ್ತೆ ಮಧ್ಯೆ ಪ್ರತಿಭಟನೆ ನಡೆಸಿದರು.

ಪಿರಿಯಾಪಟ್ಟಣ ತಾಲೂಕಿನ ಬೆಣಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ತಿಂಗಳ ಹಿಂದೆ ರಸ್ತೆ ಅಭಿವೃದ್ಧಿ ಕೆಲಸ ನಡೆಸಲಾಗಿದ್ದು, ಇದೀಗ ಮಳೆ ಬಂದರೆ ರಸ್ತೆಯಲ್ಲಿ ನೀರು ನಿಂತು ಕೆಸರು ಗದ್ದೆಯಂತಾಗುತ್ತದೆ. ಜನಸಾಮಾನ್ಯರು ಓಡಾಡಲು ಕಷ್ಟ ಸಾಧ್ಯವಾಗಿದೆ ಎಂದು ಆರೋಪಿಸಿದರು.

ಗುತ್ತಿಗೆದಾರ ಹಾಗೂ ಅಧಿಕಾರಿಗಳು ಶಾಮೀಲಾಗಿ ಕಳಪೆ ಕಾಮಗಾರಿ ನಡೆಸಿದ್ದಾರೆ ಎಂದು ದೂರಿದರು.

ಗ್ರಾಮದ ಸೋಮಶೇಖರ ಮಾತನಾಡಿ, ಲಕ್ಷ್ಮೀಪುರದಿಂದ ದಿಂಡಗಾಡು ಗೇಟ್ ತನಕ ಎರಡು ಕಿಲೋಮೀಟರ್ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಮಳೆ ಬಂದರೆ ರಸ್ತೆಯಲ್ಲಿ ವಾಹನಗಳು, ಜನರು ನಡೆದುಕೊಂಡು ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ರೈತರು ಡೇರಿ ಹಾಲು ನೀಡಲು ಈ ರಸ್ತೆಯಲ್ಲಿ ಹರಸಾಹಸದಿಂದ ಓಡಾಡಬೇಕಾಗಿದೆ ಎಂದರು.

ಗ್ರಾಮದ ಜಗದೀಶ್ ಮಾತನಾಡಿ, ಗ್ರಾಮದ ರಸ್ತೆ ಸಮಸ್ಯೆ ಬಗ್ಗೆ ಸಚಿವ ವೆಂಕಟೇಶ್ ಗಮನಕ್ಕೆ ತರಲಾದರೂ ಇದುವರೆಗೆ ಪ್ರಯೋಜನವಾಗಿಲ್ಲ ಎಂದು ದೂರಿದರು.

ರಘು, ಪ್ರದೀಪ್, ಪರಮೇಶ್, ಬಸವರಾಜು, ಸೋಮೇಗೌಡ, ವಿಶ್ವನಾಥ್, ರವಿ, ತೀರ್ಥ, ಮಹೇಶ್ ಇತರರು ಇದ್ದರು.