ಮೈಸೂರು: ಕುಣಿಗಾಲ್ ಕುದುರೆ ಫಾರಂ ಅನ್ನು ಪರಭಾರೆ ಮಾಡದೆ ಅಲ್ಲಿಯೇ ಉಳಿಸುವಂತೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಭಾನುವಾರ ಪ್ರತಿಭಟನೆ ನಡೆಸಿದರು.
ಜೋಡಿ ಕುದುರೆ ಸಾರೋಟಿನಲ್ಲಿ ನಗರದ ಹಾರ್ಡಿಂಜ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಕುಣಿಗಲ್ ಫಾರಂಗೆ 400 ವರ್ಷಗಳ ಇತಿಹಾಸ ಇದ್ದು, ಇಲ್ಲಿ ಯಾವುದೇ ಕಾರಣಕ್ಕೂ ನಗರ ನಿರ್ಮಾಣ ಮಾಡಬಾರದು. ಆಂಗ್ಲರು, ಟಿಪ್ಪು ಸುಲ್ತಾನ್ ಮೈಸೂರು ಅರಸರ ಆಳ್ವಿಕೆ ನೆನಪಿಸುತ್ತದೆ. ಕುಣಿಗಲ್ ಫಾರಂಗೆ ವಿಶ್ವದ ಮಾನ್ಯತೆ ಇದೆ. ಇಂತಹ ಫಾರಂ ಉಳಿಸಿಕೊಳ್ಳುವುದು ಸರಕಾರದ ಆದ್ಯ ಕರ್ತವ್ಯ. ಕುಣಿಗಲ್ ಕುದುರೆ ಫಾರಂ ಅನ್ನು ವಿಶ್ವದ ಜನ ಬಂದು ನೋಡುವಂತಹ ಸ್ಮಾರಕವಾಗಿ ಮಾಡಬೇಕು ಎಂದು ಒತ್ತಾಯಿಸಿದರು.