ಹಾಸನ: ಹಾಸನಾಂಬ ದೇವಾಲಯದಲ್ಲಿ ಆಡಳಿತ ವರ್ಗದ ನಡವಳಿಕೆ ಖಂಡಿಸಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ಬಾಗಿಲು ತೆಗೆದು ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷದ್ ಕಾರ್ಯಕರ್ತರು ದೇವಸ್ಥಾನದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ವಿಶ್ವಹಿಂದು ಪರಿಷತ್ ವಿಭಾಗೀಯ ಕಾರ್ಯದರ್ಶಿ ಮಹಿಪಾಲ್ ಮತ್ತು ಶಶಿಧರ್ ಮಾತನಾಡಿ, ಪ್ರತಿ ವರ್ಷ ಹಾಸನಾಂಬೆ ದರ್ಶನ ನಡೆಯುತ್ತದೆ. ದರ್ಶನೋತ್ಸವ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಆಗುತ್ತದೆ. ಈ ದೇವಾಲಯಕ್ಕೆ ತನ್ನದೆ ಆದ ಮಹತ್ವ ಇದೆ. 5 ಕಿಮೀ ಬ್ಯಾರಿಕೇಡ್ ಹಾಕಿ ಜನಸಂಖ್ಯೆ ನಿಯಂತ್ರಿಸುವವರು, ಸಿದ್ದೇಶ್ವರ ದೇವಸ್ಥಾನದ ಬಾಗಿಲು ತೆರೆಯದೆ ಭಕ್ತರಿಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ದೂರಿದರು.
ಕಾರಣ ಕೇಳಿದರೆ ಪುರೋಹಿತರ ಮೇಲೆ, ದೇವಸ್ಥಾನದ ಒಳಗಿನವರ ಮೇಲೆ ದಬ್ಬಾಳಿಕೆ ಎಸಗುತ್ತಾರೆ. ದೇವಸ್ಥಾನಕ್ಕಾಗಿ ಜೀವ ಮುಡುಪಾಗಿಟ್ಟುರುವವರು ಅನೇಕರು ಇದ್ದಾರೆ. ಇದನ್ನು ಪ್ರಶ್ನಿಸಲು ಹೋದರೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹಾಸನಾಂಬೆ ತಾಯಿ ದರ್ಶನ ನಂತರ ಶ್ರೀ ಸಿದ್ದೇಶ್ವರ ತಾಯಿ ದರ್ಶನ ಮಾಡಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.
ದೇವಸ್ಥಾನಕ್ಕಾಗಿ ಸೇವೆ ಸಲ್ಲಿಸುವವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಹಾಸನದವರಿಗೆ ಇನ್ನು ಹಾಸನಾಂಬೆ ದರ್ಶನವೇ ಸಿಕ್ಕಿಲ್ಲ. ಈ ಬಾರಿ ಆಡಳಿತ ವರ್ಗ ದರ್ಶನಕ್ಕೆ ತುಂಬಾ ಚೆನ್ನಾಗಿ ವ್ಯವಸ್ಥೆ ಮಾಡಿದೆ. ಇದನ್ನು ಹೇಳಿಕೊಂಡರೆ ಆಗುವುದಿಲ್ಲ. ಸ್ಥಳೀಯರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದರು.
ಮುಂದಿನ ದಿನಗಳಲ್ಲಿ ಹಾಸನಾಂಬೆ ಉತ್ಸವ ದೇವರು ಮತ್ತು ಭಕ್ತರ ನಡುವೆ ಸಂಬಂಧ ಇರಬೇಕು. ಹಾಸನಾಂಬೆಯನ್ನು ಹಸನಬಿ ಎಂದು ಕರೆಯುವ ಕೆಲಸವನ್ನು ದೊಡ್ಡ ದೊಡ್ಡ ಸಾಹಿತಿಗಳು ಮಾಡುತ್ತಿದ್ದು, ಇದು ಹಾಸನಾಂಬೆ ಆಗಿದ್ದು, ನಿಮಗೆ ಬೇಕಾದರೆ ಹಸನಬಿ ಬೇರೆ ಕಡೆ ಹುಡುಕಿಕೊಂಡು ಹೋಗಿ. ಹಸನಬಿ ಎಂದು ಕರೆಯುವ ಕೆಟ್ಟ ಪ್ರವೃತಿಯನ್ನು ನಿಲ್ಲಿಸಿ. ಇಂತಹ ಸಾಹಿತಿಗಳನ್ನು ಸಮಾಜದಿಂದ ದೂರವಿಡಬೇಕು ಎಂದರು.