ಬೇಲೂರು: ತಾಲೂಕಿನ ದೊಡ್ಡಿಹಳ್ಳಿ ಗ್ರಾಮದಲ್ಲಿ ಒಂದೂವರೆ ತಿಂಗಳಿಂದ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಲೈನ್‌ಮನ್ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಸೆಸ್ಕ್ ಅಧಿಕಾರಿಗಳ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿದರು.
ದೊಡ್ಡಿಹಳ್ಳಿ ತಾಲೂಕಿನ ಗಡಿ ಭಾಗದ ಕಟ್ಟ ಕಡೆಯ ಗ್ರಾಮವಾಗಿದ್ದು, ಮೂಲ ಸೌಲಭ್ಯಗಳಿಂದ ವಂಚಿತವಾಗಿ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಗ್ರಾಮಕ್ಕೆ ಕಳೆದ ಒಂದೂವರೆ ತಿಂಗಳಿಂದ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಮೈಲಿಗಟ್ಟಲೆಯಿಂದ ನೀರನ್ನು ಹೊತ್ತು ತರಬೇಕಾದ ಸ್ಥಿತಿ ಬಂದೊದಗಿದೆ. ನೀರಿನ ಅಭಾವದಿಂದ ಹೈನುಗಾರಿಕೆಯೂ ಸಂಕಷ್ಟದ ಸ್ಥಿತಿ ತಲುಪಿದೆ. ವಿದ್ಯುತ್ ಇಲ್ಲದೆ ಹಿಂಗಾರು ಬೆಳೆಗಳಿಗೆ ನೀರು ಹಾಯಿಸದೆ ಬೆಳೆ ಸಂಪೂರ್ಣ ನಾಶವಾಗಿದೆ. ಗ್ರಾಮದಲ್ಲಿನ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಸೆಸ್ಕ್ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.
ದೊಡ್ಡಿಹಳ್ಳಿ ಗ್ರಾಮಕ್ಕೆ ಬರುವ ಲೈನ್‌ಮನ್ ಜಗದೀಶ್ 15 ವರ್ಷದಿಂದ ಇಲ್ಲಿಯೇ ಠಿಕಾಣ ಹೂಡಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರಾಜಾರೋಷವಾಗಿಯೇ ಜನರ ಬಳಿ ಹಣ ಕೇಳುತ್ತಾರೆ ಹಾಗೂ ಜನರೊಂದಿಗೆ ಉಡಾಫೆಯಿಂದ ವರ್ತಿಸುತ್ತಾರೆ. ಹಣ ಕೊಟ್ಟರೆ ಮಾತ್ರ ಕಂಬ ಹತ್ತುತ್ತೇನೆ ಎನ್ನುತ್ತಾರಲ್ಲದೆ, ಕೊಡದಿದ್ದರೆ ಬಾಯಿಗೆ ಬಂದಂತೆ ಬೈಯುತ್ತಾರೆ. ಈ ಬಗ್ಗೆ ಜೆಇಗೆ ತಿಳಿಸಿದರೆ ಲೈನ್‌ಮನ್ ನಮ್ಮ ಮಾತನ್ನೇ ಕೇಳುತ್ತಿಲ್ಲ ಎಂದು ಹೇಳುತ್ತಾರೆ. ಜತೆಗೆ ಗ್ರಾಮಸ್ಥರೆಲ್ಲ ಒಟ್ಟಾಗಿ 500 ರೂ.ನೀಡಿದರೆ, ಇದು ಸಾಕಾಗುವುದಿಲ್ಲ, 2000 ರೂ.ಕೊಡಿ ಎನ್ನುತ್ತಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ರೈತರಿಗೆ ತೊಂದರೆ ಕೊಡುತ್ತಿರುವ ಲೈನ್‌ಮನ್ ಜಗದೀಶ್ ಅವರನ್ನು ತಕ್ಷಣವೇ ಕೆಲಸದಿಂದ ಅಮಾನತುಪಡಿಸಿ, ಇಲ್ಲವೇ ಈ ವೃತ್ತದಿಂದ ವರ್ಗಾಯಿಸಿ, ನಮ್ಮ ಗ್ರಾಮಕ್ಕೆ ವಿದ್ಯುತ್ ವ್ಯವಸ್ಥೆ ಸರಿಪಡಿಸಿಕೊಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದೊಡ್ಡಿಹಳ್ಳಿ ಗ್ರಾಮದ ಯಶೋಧರ್, ಧರ್ಮಣ್ಣ, ಪ್ರವೀಣ್, ಅನಿಲ್ ಕುಮಾರ್, ಲೋಕೇಶ್, ಹರ್ಷ, ಅಜಿತ್, ತೀರ್ಥಮಲ್ಲಯ್ಯ, ಶಿವಕುಮಾರ್, ದಿವಾಕರ್, ಹಾಲಪ್ಪ ಮತ್ತಿತರರಿದ್ದರು.